ಆಧುನಿಕ ಆರ್ಥಿಕತೆಯಲ್ಲಿ ಕರ್ನಾಟಕ ವಿಶ್ವದಲ್ಲೇ ಮೊದಲ ಸ್ಥಾನಕ್ಕೇರುವತ್ತ ಸಾಗುತ್ತಿದೆ-ಅಶ್ವತ್ಥನಾರಾಯಣ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆಧುನಿಕ ಆರ್ಥಿಕತೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿ, ವಿಶ್ವದಲ್ಲೇ ಮೊದಲ ಸ್ಥಾನಕ್ಕೇರುವತ್ತ ಸಾಗುತ್ತಿದೆ ಎಂದು ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಹೇಳಿದರು.

ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಆರೋಗ್ಯ, ಶಿಕ್ಷಣ, ಬ್ಯಾಂಕಿಂಗ್ ಸೇರಿದಂತೆ ಎಲ್ಲ ವಲಯಗಳಲ್ಲಿ ಸುಧಾರಣೆಗಳನ್ನು ತಂದಿದ್ದಾರೆ. ಡಿಜಿಟಲ್ ವ್ಯವಸ್ಥೆ ಪರಿಣಾಮಕಾರಿಯಾಗಿ ಜಾರಿಯಾಗಿದೆ. ದೇಶದ ಎರಡೂವರೆ ಲಕ್ಷ ಗ್ರಾಮಗಳಿಗೆ ಆಪ್ಟಿಕಲ್ ಸೇವೆ ಒದಗಿಸಲಾಗಿದೆ. ಮೂಲಸೌಕರ್ಯವನ್ನು ಅಗಾಧ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ರೈಲ್ವೆಯಲ್ಲಿ ಬಹಳಷ್ಟು ಸುಧಾರಣೆ ತರಲಾಗಿದ್ದು, ಆರಾಮದಾಯಕ ಪ್ರಯಾಣ ಮತ್ತು ಸುರಕ್ಷತೆ ಇದರಿಂದ ಸಾಧ್ಯವಾಗಿದೆ.

‘ವಂದೇ ಭಾರತ್’ ರೈಲು ಆತ್ಮನಿರ್ಭರತೆಗೆ ನಿದರ್ಶನವಾಗಿದೆ. ಕಳೆದ 9 ವರ್ಷಗಳಲ್ಲಿ 70 ವಿಮಾನನಿಲ್ದಾಣಗಳು ನಿರ್ಮಾಣಗೊಂಡಿವೆ ಎಂದರು. ರಾಜ್ಯದಲ್ಲಿ ಜಲಜೀವನ್, ಆಯುಷ್ಮಾನ್ ಭಾರತ್, ಪಿಎಂ ಆವಾಸ್, ಕಿಸಾನ್ ಸಮ್ಮಾನ್ ಸೇರಿದಂತೆ ಕೇಂದ್ರದ ಯೋಜನೆಗಳು ಸಂಪೂರ್ಣವಾಗಿ ಜಾರಿಗೊಂಡು, ಅಭಿವೃದ್ಧಿಯ ವೇಗ ಹೆಚ್ಚಿದೆ. ಬೆಳೆಗಾರನಿಂದ ಬಳಕೆದಾರನವರೆಗೆ ತಂತ್ರಜ್ಞಾನ ಬಳಕೆಯಿಂದ ಕೃಷಿಯಲ್ಲಿ ಕ್ರಾಂತಿ ಮಾಡಲಾಗಿದೆ.

ರೈತರು ಉತ್ತಮ ಭವಿಷ್ಯ ಕಟ್ಟಿಕೊಳ್ಳುವತ್ತ ಸಾಲಸೌಲಭ್ಯ ಸೇರಿದಂತೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆದರೆ, ಕಾಂಗ್ರೆಸ್, ರೈತರ ಪ್ರಗತಿಗೆ ಪೂರಕವಾದ ಕೃಷಿ ಕಾನೂನು ಸೇರಿದಂತೆ ಇತರ ವಿಷಯಗಳನ್ನು ವಿರೋಧಿಸುತ್ತಿದೆ ಎಂದರು. ಆಧುನಿಕ ಆರ್ಥಿಕತೆಯಲ್ಲಿ ಮುಂದಿರುವ ಕರ್ನಾಟಕ, ಕಳೆದ ವರ್ಷ 100 ಶತಕೋಟಿ ಡಾಲರ್ ಮಾಹಿತಿ-ತಂತ್ರಜ್ಞಾನ ರಫ್ತು ಮಾಡಿದೆ. ಉದ್ಯಮಶೀಲತೆಯನ್ನು ಇಡೀ ಕರ್ನಾಟಕಕ್ಕೆ ವಿಸ್ತರಿಸಲಾಗುತ್ತಿದೆ. ಉದ್ಯಮ ಸ್ನೇಹಿ ವಾತಾವರಣದಲ್ಲೂ ರಾಜ್ಯ ಮೊದಲ ಸ್ಥಾನದಲ್ಲಿದ್ದು, ಆವಿಷ್ಕಾರದ ತಾಣವೆನಿಸಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದ ಮೊದಲ ರಾಜ್ಯವಾಗಿದ್ದು, ಗುಣಮಟ್ಟದ ಶಿಕ್ಷಣ ಹಾಗೂ ಕಲಿಕೆ ಮತ್ತು ಕೌಶಲ್ಯ ಇದರ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!