ಕರ್ನಾಟಕ-ಕೇರಳ ಬೆಸೆಯುವ ಕೂಟುಹೊಳೆ ಸೇತುವೆ ಲೋಕಾರ್ಪಣೆ: ಈಡೇರಿದ ಜನತೆಯ ಬಹುಕಾಲದ ಬೇಡಿಕೆ

ದಿಗಂತ ವರದಿ ಮಡಿಕೇರಿ:

ಕರ್ನಾಟಕ ಹಾಗೂ ಕೇರಳ ರಾಜ್ಯಗಳನ್ನು ಬೇರ್ಪಡಿಸುವ ವೀರಾಜಪೇಟೆ ಸಮೀಪದ ಮಾಕುಟ್ಟ ಬಳಿ ಕೇರಳ ಸರಕಾರ ನಿರ್ಮಿಸಿರುವ ನೂತನ ಸೇತುವೆಯನ್ನು ಸೋಮವಾರ ಲೋಕಾರ್ಪಣೆಗೊಳಿಸಲಾಯಿತು.
ಸರಳ ಕಾರ್ಯಕ್ರಮದಲ್ಲಿ ಕೇರಳ ಸರ್ಕಾರದ ಲೋಕೋಪಯೋಗಿ ಸಚಿವ ಮಹಮ್ಮದ್ ರಿಯಾಜ್, ಕೇರಳದ ಇರಿಟ್ಟಿ ಶಾಸಕ ಸನ್ನಿ ಜೋಸೆಫ್, ವೀರಾಜಪೇಟೆಯ ಶಾಸಕ ಕೆ.ಜಿ.ಬೋಪಯ್ಯ, ಕರ್ನಾಟಕ ವಿಧಾನಪರಿಷತ್ತಿನ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ ಅವರುಗಳು ತೆರೆದ ಜೀಪಿನಲ್ಲಿ ಸೇತುವೆಯಲ್ಲಿ ಸಂಚರಿಸುವ ಮೂಲಕ ಸೇತುವೆಯನ್ನು ಲೋಕಾರ್ಪಣೆಗೊಳಿಸಿದರು.

ಕೊಡಗು ಜಿಲ್ಲೆ ಹಾಗೂ ನೆರೆಯ ಕೇರಳದ ಕಣ್ಣೂರು ನಡುವೆ ಸಂಪರ್ಕ ಕಲ್ಪಿಸುವ ಅಂತರರಾಜ್ಯ ಹೆದ್ದಾರಿಯ ಮಾಕುಟ್ಟ ಬಳಿ ಕೂಟುಹೊಳೆಗೆ ಕೇರಳ ಸರ್ಕಾರ ಸುಮಾರು 6.75 ಕೋಟಿ ರೂ.ವೆಚ್ಚದಲ್ಲಿ ಕೇರಳ ಸರಕಾರ ನೂತನ ಸೇತುವೆ ನಿರ್ಮಿಸಿದೆ. ಈ ಮೂಲಕ ಉಭಯ ರಾಜ್ಯಗಳ ಜನತೆಯ ಬಹುಕಾಲದ ಬೇಡಿಕೆ ಈಡೇರಿದಂತಾಗಿದೆ.

ಕೂಟುಹೊಳೆ ಹಳೆಯ ಸೇತುವೆ ಶತಮಾನಗಳ ಹಿಂದೆ ಬ್ರಿಟೀಷರ ಕಾಲದಲ್ಲಿ ನಿರ್ಮಾಣವಾಗಿತ್ತು. ಆಗಿನ ಅಗತ್ಯಕ್ಕೆ ತಕ್ಕಂತೆ ಏಕಕಾಲದಲ್ಲಿ ಒಂದು ವಾಹನ ಮಾತ್ರ ಸಂಚರಿಸಬಹುದಾದಷ್ಟು ಕಿರಿದಾಗಿದ್ದ ಆ ಸೇತುವೆ ಶಿಥಿಲಗೊಂಡಿರುವುದರಿಂದ ಹೊಸ ಸೇತುವೆ ನಿರ್ಮಿಸಬೇಕೆಂಬ ಕೂಗು ಹಲವು ವರ್ಷಗಳಿಂದ ಕೇಳಿ ಬಂದಿತ್ತು.
ಇದನ್ನು ಮನಗಂಡ ಕೇರಳ ಸರ್ಕಾರ 2017ರಲ್ಲಿ 84 ಮೀ.ಉದ್ದ ಹಾಗೂ 12 ಮೀ ಅಗಲದ ನೂತನ ಸೇತುವೆ ನಿರ್ಮಾಣಕ್ಕೆ ಕೈಹಾಕಿತು. ಆದರೆ ಕಾಮಗಾರಿ ಆರಂಭಗೊಂಡ ಒಂದೆರಡು ತಿಂಗಳಲ್ಲಿಯೇ ಕರ್ನಾಟಕದ ಅರಣ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ಮೆಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿತ್ತು. ಈ‌ ನಡುವೆ ಕಣ್ಣೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಆರಂಭವಾಗಿದ್ದರಿಂದ ಸೇತುವೆ ಕಾಮಗಾರಿ ಮುಂದುವರಿಸುವುದು ಅನಿವಾರ್ಯವಾಯಿತು.
ಬಳಿಕ ಎರಡೂ ಸರಕಾರಗಳು ಒಪ್ಪಂದ ಮಾಡಿಕೊಂಡ ನಂತರ ವೇಗ ಪಡೆದುಕೊಂಡ ಕಾಮಗಾರಿ ಕಳೆದ ಒಂದು ತಿಂಗಳ ಹಿಂದೆಯಷ್ಟೇ ಪೂರ್ಣಗೊಂಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!