ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀ ಕ್ಷೇತ್ರ ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರತಿದಿನ ನೆರವೇರಿಸಲಾಗುವ ಮೊದಲ ಆರತಿಯಲ್ಲಿ ಇನ್ಮುಂದೆ ಕರ್ನಾಟಕದ ಸಚಿವರು, ಶಾಸಕರು, ನ್ಯಾಯಾಧೀಶರು, ಹಿರಿಯ ಅಧಿಕಾರಿಗಳು ಹಾಗೂ ಗಣ್ಯ ವ್ಯಕ್ತಿಗಳು ಭಾಗವಹಿಸಬಹುದಾಗಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ ಮಾಡಿದ್ದಾರೆ.
ತಿರುಪತಿ ತಿರುಮಲ ದೇವಸ್ಥಾನದಲ್ಲಿ ಪ್ರತಿದಿನ ಬೆಳಿಗ್ಗೆ ಕರ್ನಾಟಕದ ಪರವಾಗಿ ಮೊದಲ ಆರತಿಯನ್ನು ಸಲ್ಲಿಸಲಾಗುತ್ತದೆ. ಈ ಸಂಪ್ರದಾಯಕ್ಕೆ 400 ವರ್ಷಗಳ ಇತಿಹಾಸವಿದೆ. ಹಂಪಿಯ ವಿಜಯನಗರ ಸಾಮ್ರಾಜ್ಯದ ಅರಸರು ಹಾಗೂ ಅವರ ನಂತರ ಮೈಸೂರಿನ ಒಡೆಯರ್ ರಾಜವಂಶದವರು ತಿರುಪತಿ ವೆಂಕಟೇಶ್ವರ ಸ್ವಾಮಿಗೆ ಅಪಾರ ಪ್ರಮಾಣದ ಚಿನ್ನಾಭರಣ, ಭೂಮಿ ಹಾಗೂ ನಿತ್ಯ ಪೂಜಾ ಕೈಂಕರ್ಯಗಳಿಗೆ ಬೇಕಾದ ಸಾಮಗ್ರಿಗಳನ್ನು ದಾನವಾಗಿ ನೀಡುತ್ತಿದ್ದರು. ಮೈಸೂರು ಸಂಸ್ಥಾನವು ದೇವಸ್ಥಾನದ ದೈನಂದಿನ ಪೂಜಾ ವೆಚ್ಚಗಳನ್ನು ಭರಿಸುತ್ತಿದ್ದರಿಂದ ಮತ್ತು ಸಾಮಗ್ರಿಗಳನ್ನು ಪೂರೈಸುತ್ತಿದ್ದರಿಂದ, ಪ್ರತಿದಿನ ಬೆಳಿಗ್ಗೆ ದೇವರಿಗೆ ಬೆಳಗುವ ಪ್ರಥಮ ಆರತಿಯನ್ನು ಸ್ವೀಕರಿಸುವ ಗೌರವ ಮತ್ತು ಹಕ್ಕು ಮೈಸೂರು ರಾಜರಿಗೆ ಲಭಿಸಿತು.
ಸ್ವಾತಂತ್ರ್ಯಾನಂತರ ಈ ರಾಜಪ್ರಭುತ್ವದ ಹಕ್ಕನ್ನು ಕರ್ನಾಟಕ ಸರ್ಕಾರವು ಕಾನೂನುಬದ್ಧವಾಗಿ ಮುಂದುವರಿಸಿಕೊಂಡು ಬಂದಿದೆ. ಶಿಷ್ಟಾಚಾರದ ಪ್ರಕಾರ ಪ್ರತಿ ಮುಂಜಾನೆ ಗರ್ಭಗುಡಿಯ ಮುಂಭಾಗದಲ್ಲಿ (ಕುಲಶೇಖರ ಪಡಿ) ನಿಂತು ಇಡೀ ಕರ್ನಾಟಕದ ಪರವಾಗಿ ಈ ಮೊದಲ ಆರತಿಯನ್ನು ಹಾಗೂ ದೇವರ ಪ್ರಸಾದವನ್ನು ಕರ್ನಾಟಕದ ಮುಖ್ಯಮಂತ್ರಿಗಳು ಸ್ವೀಕರಿಸಬೇಕು. ಇಲ್ಲಿಯವರೆಗೆ ಅವರ ಅನುಪಸ್ಥಿತಿಯಲ್ಲಿ ರಾಜ್ಯ ಸರ್ಕಾರದ ವತಿಯಿಂದ ನೇಮಕಗೊಂಡ ವಿಶೇಷ ಅಧಿಕಾರಿಯೊಬ್ಬರು ಸ್ವೀಕರಿಸುತ್ತಿದ್ದರು ಎಂದಿದ್ದಾರೆ.
ನಮ್ಮ ರಾಜ್ಯದ ಅನೇಕ ಜನಪ್ರತಿನಿಧಿಗಳು ಮತ್ತು ಶಾಸಕರು ತಿರುಪತಿಗೆ ಹೋದಾಗ ಸೂಕ್ತ ದರ್ಶನ ಸಿಗದೆ ಬರಿಗೈಲಿ ವಾಪಸ್ ಬಂದ ಉದಾಹರಣೆಗಳಿವೆ. ಇನ್ಮುಂದೆ ಕರ್ನಾಟಕದ ಪರವಾಗಿ ಸೇವೆ ಸಲ್ಲಿಸುವ ಎಲ್ಲ ಗಣ್ಯರಿಗೂ ತಿಮ್ಮಪ್ಪನ ಎದುರು ನಿಂತು ಪ್ರಾರ್ಥಿಸುವ ಈ ಪರಮ ಸೌಭಾಗ್ಯ ಸಿಗಲಿದೆ. ಇದು ನನ್ನ ಮುಖ್ಯಮಂತ್ರಿ ಅಧಿಕಾರಾವಧಿಯ ಅತ್ಯಂತ ಪ್ರಮುಖ ಮತ್ತು ಮಹತ್ವದ ಘೋಷಣೆಯಾಗಿದೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ.



