ಕರ್ನಾಟಕಕ್ಕೆ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಸುರಿಮಳೆ: ಬರೋಬ್ಬರಿ 44 ಯೋಜನೆಗಳಿಗೆ ಚಾಲನೆ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಕರ್ನಾಟಕದಲ್ಲಿ ಸೋಮವಾರ ರಸ್ತೆಗಳದ್ದೇ ಸುದ್ದಿ. ಒಂದರ್ಥದಲ್ಲಿ ಕರ್ನಾಟಕಕ್ಕೆ ರಾಷ್ಟ್ರೀಯ ಹೆದ್ದಾರಿಗಳ ಸುರಿಮಳೆ ಎಂದೇ ಉಲ್ಲೇಖಿಸಬಹುದು. ಕೇಂದ್ರ ಹೆದ್ದಾರಿ ಸಚಿವಾಲಯದಿಂದ ರಾಜ್ಯಕ್ಕೆ ಮಂಜೂರಾದ 44 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ವಿವಿಧ ಕಡೆಗಳಲ್ಲಿ ಶಂಕು ಸ್ಥಾಪನೆ ಮತ್ತು ಕಾಮಗಾರಿಗಳ ಲೋಕಾರ್ಪಣೆಯನ್ನು ಕೇಂದ್ರ ರಸ್ತೆ ಮತ್ತು ರಾ.ಹೆ. ಸಚಿವ ನಿತಿನ್ ಗಡ್ಕರಿ ನೆರವೇರಿಸಿದರು.

ಒಟ್ಟು ₹ 19,930 ಕೋಟಿ ವೆಚ್ಚದ 1,928 ಕಿ.ಮೀ. ಉದ್ದದ 44 ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. ಬೆಳಗಾವಿಯಲ್ಲಿ ₹ 3,972 ಕೋಟಿ ವೆಚ್ಚದ 238 ಕಿ.ಮೀ. ಉದ್ದದ 5 ಹೆದ್ದಾರಿ ಕಾಮಗಾರಿಗಳು; ಹುಬ್ಬಳ್ಳಿಯಲ್ಲಿ ₹ 12,795 ಕೋಟಿ ಅಂದಾಜು ವೆಚ್ಚದ 925 ಕಿ.ಮೀ. ಉದ್ದದ 26 ಕಾಮಗಾರಿಗಳು ಹಾಗೂ ಮಂಗಳೂರಿನಲ್ಲಿ 164 ಕಿ.ಮೀ. ಉದ್ದದ ₹ 3,163 ಕೋಟಿ ವೆಚ್ಚದ 15 ಕಾಮಗಾರಿಗಳಿಗೆ ಶಂಕು ಸ್ಥಾಪನೆ ಮತ್ತು ಲೋಕಾರ್ಪಣೆ ನಡೆಯಿತು.

ಈ ವೇಳೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಕಲ್ಲಿದ್ದಲು ಸಚಿವ ಪಹ್ಲಾದ ಜೋಶಿ, ರಾಜ್ಯ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಸಹಿತ ಜಿಲ್ಲೆಗಳ ಉಸ್ತುವಾರಿ ಸಚಿವರು ಹಾಗೂ ಜನಪ್ರತಿನಿಧಿಗಳು ಸಾಥ್ ನೀಡಿದರು.

7 ವರ್ಷದಲ್ಲಿ 181 ಯೋಜನೆಗಳು:
ಕಳೆದ ಏಳು ವರ್ಷಗಳಲ್ಲಿ ರಾಜ್ಯಕ್ಕೆ 181 ಯೋಜನೆಗಳಲ್ಲಿ ಒಟ್ಟು 42ಸಾವಿರ ಕಿ.ಮೀ. ಉದ್ದ ರಾಷ್ಟ್ರೀಯ ಹೆದ್ದಾರಿಗಳು ಹೊಸದಾಗಿ ಲಭಿಸಿವೆ. ಇವುಗಳ ಒಟ್ಟು ಮೊತ್ತ ₹ 41,862 ಕೋಟಿಗಳು. 2004-2014ರವರೆಗೆ 10 ವರ್ಷಗಳಲ್ಲಿ ಕರ್ನಾಟಕಕ್ಕೆ ಕೇವಲ 19 ಯೋಜನೆಗಳನ್ನು ಒದಗಿಸಿದ್ದು, ಒಟ್ಟು ಮೊತ್ತ ₹ 8,809 ಕೋಟಿಗಳಾಗಿವೆ. ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಿದ ರಸ್ತೆಯ ಉದ್ದ 1,152 ಕಿ.ಮೀ.ಗಳು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಭಾರತ್ ಮಾಲಾ, ಸಾಗರ್ ಮಾಲಾ ಮತ್ತು ಮುಂದಿನ ವರ್ಷದ ಬಜೆಟ್‌ನಲ್ಲಿ ಪರ್ವತ ಮಾಲಾ ಯೋಜನೆಗಳಲ್ಲಿ ದೇಶದಾದ್ಯಂತ ಹೆದ್ದಾರಿಗಳ ಅಭಿವೃದ್ಧಿಯಲ್ಲಿ ತೊಡಗಿದೆ. ಕರ್ನಾಟಕದಲ್ಲಿ ಅಭಿವೃದ್ಧಿಯ ಪರ್ವ ಶುರುವಾಗಿದ್ದು, ಬಂಪರ್ ಯೋಜನೆಗಳಿಗೆ ಚಾಲನೆ ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!