ಸಂಕಷ್ಟದಲ್ಲಿದೆ ಸಾಹಿತ್ಯಾಸಕ್ತರ ಕುಟುಂಬ: ಈ ಬಡ ವಿದ್ಯಾರ್ಥಿಯ ಬದುಕಲ್ಲಿ ಬೆಳಕಾಗುವಿರಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ತಮ್ಮ ಪುಟ್ಟ ಕಬ್ಬಿನ ಹಾಲು, ಎಳನೀರು ವ್ಯಾಪಾರದಲ್ಲಿ ಬರುವ ಗಳಿಕೆಯಲ್ಲಿ ಒಂದು ಪಾಲು ಪುಸ್ತಕ ಸಂಗ್ರಹಕ್ಕಾಗಿ ಮೀಸಲಿಟ್ಟು, ಸಾವಿರಗಟ್ಟಲೆ ಪುಸ್ತಕ ಸಂಗ್ರಹಿಸಿ ಮನೆಯನ್ನೇ ಗ್ರಂಥಾಲಯವನ್ನಾಗಿ ಸಿರುವ ಸಾಹಿತ್ಯ ಪ್ರೇಮಿ ಕಾಸರಗೋಡಿನ ಮಂಜೇಶ್ವರ ಉದ್ಯಾವರ ನಿವಾಸಿ ಸುರೇಂದ್ರ ಅವರ ಕುಟುಂಬ ಈಗ ತೀರಾ ಸಂಕಷ್ಟದಲ್ಲಿದೆ.
ಬಡತನದ ನಡುವೆಯೇ ಭವಿಷ್ಯದ ನೂರಾರು ಕನಸು ಹೊತ್ತು ಅಂತಿಮ ವರ್ಷದ ಪದವಿ ಓದುತ್ತಿರುವ ಅವರ ಪುತ್ರ ಚೈತ್ರೇಶ್ ದಿಢೀರ್ ರಕ್ತದ ಕ್ಯಾನ್ಸರ್‌ಗೆ ತುತ್ತಾಗಿ ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಹಾಸಿಗೆ ಪಾಲಾಗಿದ್ದಾನೆ. ಪ್ರಸ್ತುತ ಮಂಗಳೂರಿನ ಎಸ್‌ಸಿಎಸ್ ಆಸ್ಪತ್ರೆಯ ೩೦೧ ನೇ ವಾರ್ಡಿನಲ್ಲಿ ಒಳರೋಗಿಯಾಗಿ ದಾಖಲಾಗಿರುವ ಈತನ ಚಿಕಿತ್ಸೆಗೆ ಅಂದಾಜು ೬ ಲಕ್ಷದ ವರೆಗೆ ವೆಚ್ಚ ತಗುಲಬಹುದೆಂದು ಆಸ್ಪತ್ರೆಯ ತಜ್ಞ ವೈದ್ಯರು ತಿಳಿಸಿದ್ದಾರೆ. ಮಗನ ಚಿಕಿತ್ಸೆಗೆ ಅಷ್ಟೊಂದು ದೊಡ್ಡ ಮೊತ್ತದ ಹಣವನ್ನು ಭರಿಸಲು ಸಾಧ್ಯವಾಗದೆ ಸುರೇಂದ್ರ ಹತಾಶರಾಗಿದ್ದಾರೆ.
ನಾಡಿಗೇ ಮಾದರಿಯಾಗಿರುವ ಈ ಸಾಹಿತ್ಯಾಸಕ್ತ ಕುಟುಂಬ ಕಂಗಾಲಾಗಿದ್ದು ಈಗ ದಾನಿಗಳು, ಸಾಹಿತ್ಯಾಸಕ್ತರ ಮಾನವೀಯ ಕಳಕಳಿ, ಉದಾರ ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿದೆ. ಸಹೃದಯರು ನೆರವಾಗುವ ಮೂಲಕ ಚೈತ್ರೇಶ್ ಬದುಕಲ್ಲಿ ಮತ್ತೆ ನಗು ಅರಳಿಸಲು ಕೈಜೋಡಿಸಬೇಕಾಗಿದೆ.
ಬಡತನದ ನಡುವೆಯೂ ಸಾಹಿತ್ಯ ಪ್ರೇಮದ ತುಡಿತ…
ಸುರೇಂದ್ರ ಅವರು ಉದ್ಯಾವರ ದೈವಸ್ಥಾನದ ಮಹಾದ್ವಾರದ ಬಳಿ ಕಬ್ಬಿನ ಹಾಲು, ಎಳನೀರು ವ್ಯಾಪಾರ ನಡೆಸುತ್ತಿದ್ದಾರೆ. ಅಪಾರ ಸಾಹಿತ್ಯ ಪ್ರೇಮಿಯಾಗಿರುವ ಇವರು, ತನ್ನ ದುಡಿಮೆಯ ಒಂದು ಪಾಲನ್ನು ಪುಸ್ತಕ ಸಂಗ್ರಹಕ್ಕಾಗಿ ಮೀಸಲಿಟ್ಟು, ಸಾವಿರಗಟ್ಟಲೆ ಪುಸ್ತಕ ಸಂಗ್ರಹಿಸಿ ಮನೆಯನ್ನೇ ಗ್ರಂಥಾಲಯವನ್ನಾಗಿಸಿದ್ದಾರೆ. ಅಷ್ಟೇ ಅಲ್ಲದೆ ಜ್ಞಾನ ದಾಹದಿಂದ ಬಂದವರಿಗೆ, ಆಸಕ್ತರಿಗೆ, ಜಾನಪದ ಸಂಶೋಧಕರಿಗೆ ಕ್ಷೇತ್ರ ಕಾರ್ಯದ ಮಾಹಿತಿದಾರರಾಗಿಯೂ ನೆರವಾಗುತ್ತಾರೆ. ಸಮಾಜದ ಎಲ್ಲಾ ಕಾರ್ಯಗಳಲ್ಲಿ ಸದಾ ಲವಲವಿಕೆಯಿಂದ ಪಾಲ್ಗೊಳ್ಳುವ ಅವರಿಗೆ ಮಗನ ತೀವ್ರ ಅನಾರೋಗ್ಯ ಬರಸಿಡಿಲಿನಂತೆ ಬಂದೆರಗಿದೆ. ಸುರೇಂದ್ರರು ಮನೆಯಲ್ಲಿ ಇತರ ಯಾವುದೇ ಆದಾಯ ಮಾರ್ಗಗಳು ಇಲ್ಲ. ಮಗನ ಚಿಕಿತ್ಸಾ ವೆಚ್ಚಕ್ಕಾಗಿನ ಅಲೆದಾಟದಿಂದಾಗಿ ಇತ್ತ ವ್ಯಾಪಾರ ನಡೆಸುವುದೂ ಸಾಧ್ಯವಾಗುತ್ತಿಲ್ಲ. ಇಂತಹಾ ಸಂಕಷ್ಟದ ಸ್ಥಿತಿಯಲ್ಲಿ ಸಹೃದಯರು ಈ ಸಾಹಿತ್ಯ ಪ್ರೇಮಿಗೆ ನೆರವಿನ ಹಸ್ತ ಚಾಚಬೇಕಿದೆ.
ಹೀಗೆ ನೆರವಾಗಿ…
ಚೈತ್ರೇಶ್‌ಗೆ ನೆರವು ನೀಡಬಯಸುವ ಸಹೃದಯಿ ದಾನಿಗಳು ಸುರೇಂದ್ರ ಅವರ ಹೆಸರಿನಲ್ಲಿ ಕೇರಳ ಗ್ರಾಮೀಣ ಬ್ಯಾಂಕ್‌ನ ಕುಂಜತ್ತೂರು ಶಾಖೆಯಲ್ಲಿ ಇರುವ ಈ ಕೆಳಗೆ ನೀಡಿದ ಖಾತೆಗೆ ಧನ ಸಹಾಯ ಮಾಡಬಹುದಾಗಿದೆ.
Kerala Garmin Bank, Kunjathur Branch
Account Holder: Surendra
A/C No: 40459100004483
IFSC code:
KLGB0040459
Phone No.: 9400975374

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!