ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ಸಾಹಿತ್ಯ ಅಕಾಡೆಮಿಯ 2022ರ ಸಾಲಿನ ‘ವಾರ್ಷಿಕ ಗೌರವ ಪ್ರಶಸ್ತಿ, ಸಾಹಿತ್ಯ ಶ್ರೀ ಪ್ರಶಸ್ತಿ ಮತ್ತು 2021ನೇ ಸಾಲಿನ ಪುಸ್ತತ ಪ್ರಶಸ್ತಿಗಳು ಪ್ರಕಟಗೊಂಡಿದ್ದು, ಸಾಹಿತಿಗಳಾದ ಆರ್.ಕೆ. ಹುಡಗಿ, ಅಗ್ರಹಾರ ಕೃಷ್ಣಮೂರ್ತಿ, ಇಂದಿರಾ ಹೆಗ್ಗಡೆ, ರಂಜಾನ್ ದರ್ಗಾ ಹಾಗೂ ತುಂಬಾಡಿ ರಾಮಯ್ಯ ಸೇರಿದಂತೆ 15 ಸಾಹಿತಿಗಳು ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಬುಧವಾರ ನಗರದ ಸಾಹಿತ್ಯ ಅಕಾಡಮಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಕಾಡಮಿ ಅಧ್ಯಕ್ಷ ಪ್ರೊ.ಎಲ್.ಎನ್.ಮುಕುಂದರಾಜ್ ಅವರು, ಹಿರಿಯ ಸಾಹಿತಿ ರಂಜಾನ್ ದರ್ಗಾ ಸೇರಿ 5 ಮಂದಿ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, 10 ಮಂದಿ ಸಾಹಿತ್ಯ ಶ್ರೀ ಪ್ರಶಸ್ತಿ, 17 ಜನರಿಗೆ 2021ನೆ ಪುಸ್ತಕ ಬಹುಮಾನ, 8 ಜನರಿಗೆ ದತ್ತಿ ಬಹುಮಾನ ಪುರಸ್ಕೃತರಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಅಮೂಲ್ಯವಾದ ಸೇವೆಯನ್ನು ಪರಿಗಣಿಸಿ, 2022ನೆ ಸಾಲಿನ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿಗೆ ಸಾಹಿತಿಗಳಾದ ಆರ್.ಕೆ.ಹುಡಗಿ, ಅಗ್ರಹಾರ ಕೃಷ್ಣಮೂರ್ತಿ, ಇಂದಿರಾ ಹೆಗಡೆ, ರಂಜಾನ್ ದರ್ಗಾ, ತುಂಬಾಡಿ ರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ತಲಾ ರೂ,50 ಸಾವಿರ ನಗದು ಬಹುಮಾನ ಒಳಗೊಂಡಿದೆ. ಈ ಬಾರಿ ಪ್ರಶಸ್ತಿಗಳಿಗೆ ವಿಭಾಗವಾರು ಸಾಹಿತಿಗಳನ್ನು ಗುರುತಿಸಿ, ಆಯ್ಕೆ ಮಾಡಲಾಗಿದೆ’ ಎಂದು ತಿಳಿಸಿದರು.