ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನು ಡೀಪ್ ಕ್ಲೀನಿಂಗ್ ಮಾಡೋಕೆ ಸಜ್ಜಾಗಿದೆ. ನಕಲಿ ಮತದಾರರಿಗೆ ಬ್ರೇಕ್ ಹಾಕಲು ನಾಳೆಯಿಂದ ಅತ್ಯಂತ ಕಟ್ಟುನಿಟ್ಟಿನ 3ನೇ ಹಂತದ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಆರಂಭವಾಗಲಿದೆ.
ರಾಜ್ಯ ಸೇರಿ ದೇಶದ 16 ರಾಜ್ಯಗಳು ಹಾಗೂ 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಬೃಹತ್ ಕಾರ್ಯಾಚರಣೆ ನಡೆಯಲಿದೆ. ನಾಳೆ ಆರಂಭವಾಗುವ ಪರಿಷ್ಕರಣೆ ಜುಲೈ 29ರವರೆಗೆ ನಡೆಯಲಿದೆ. ಆಯಾ ಬೂತ್ ಮಟ್ಟದ ಅಧಿಕಾರಿಗಳು ನಿಮ್ಮ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದಾರೆ.
ನಕಲಿ ಮತದಾರರನ್ನು ಕಿತ್ತೆಸೆಯಲು ಆಯೋಗ ಕುಟುಂಬದ ವಂಶಾವಳಿ ಆಧಾರಿತ ಮ್ಯಾಪಿಂಗ್ ತಂತ್ರಜ್ಞಾನವನ್ನು ಬಳಸಲಿದೆ. ಸಮೀಕ್ಷೆ ವೇಳೆ ವೋಟರ್ ಐಡಿ ಹಾಗೂ ಆಧಾರ್ ಕಾರ್ಡ್ ವಿವರಗಳು ಹೊಂದಾಣಿಕೆ ಆಗಲೇಬೇಕಿದೆ.
ಬಿಎಲ್‌ಒಗಳು ಮನೆಗೆ ಭೇಟಿ ನೀಡುವ ಸಂದರ್ಭ ಯಾರು ಮನೆಯಲ್ಲಿ ಇಲ್ಲ, ಮನೆ ಬದಲಾವಣೆ ಮಾಡಿ ಬೇರೆ ಕಡೆ ಹೋಗಿದ್ದಾರೋ ಅಂಥವರ ಹೆಸರನ್ನು ಮತದಾರರ ಪಟ್ಟಿಯಿಂದ ನೇರವಾಗಿ ಡಿಲೀಟ್ ಮಾಡುವ ಸಾಧ್ಯತೆ ಇದೆ. ಹೀಗಾಗಿ ಸಾರ್ವಜನಿಕರು ಆಸಕ್ತಿಯಿಂದ ತಮ್ಮ ಹೆಸರು ಮತದಾರರ ಪಟ್ಟಿಯಿಂದ ಬಿಟ್ಟುಹೋಗದಂತೆ ನೋಡಿಕೊಳ್ಳಬೇಕಿದೆ.
18 ವರ್ಷ ತುಂಬಿದ ಯುವಕ-ಯುವತಿಯರು ಅಥವಾ ಇದುವರೆಗೆ ಹೆಸರು ಸೇರಿಸದವರು ಫಾರಂ 6 ಬಳಸಿ ಹೊಸದಾಗಿ ಹೆಸರು ನೊಂದಾಯಿಸಿಕೊಳ್ಳಬಹುದು. ಮತದಾರರ ಪಟ್ಟಿಯಲ್ಲಿ ಹೆಸರು, ವಿಳಾಸ, ವಯಸ್ಸು ತಿದ್ದುಪಡಿ ಮಾಡಲು ಅಥವಾ ಹೊಸ ವಿಳಾಸಕ್ಕೆ ಹೆಸರು ವರ್ಗಾಯಿಸಲು ಫಾರಂ 8 ಅನ್ನು ಬಳಸಬೇಕಾಗುತ್ತದೆ. ಜೂನ್ 30 ರಿಂದ ಜುಲೈ 29ರವರೆಗೆ ಬಿಎಲ್‌ಒಗಳಿಂದ ಮನೆ-ಮನೆ ಸಮೀಕ್ಷೆ ಪ್ರಕ್ರಿಯೆ ನಡೆಯಲಿದೆ. ಆಗಸ್ಟ್ 5ರಂದು ಮತದಾರರ ಕರಡು ಪಟ್ಟಿ ಪ್ರಕಟಣೆ. ಅಕ್ಟೋಬರ್ 7ರಂದು ಎಲ್ಲಾ ಆಕ್ಷೇಪಣೆಗಳ ಇತ್ಯರ್ಥದ ಬಳಿಕ ಅಧಿಕೃತ ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ.
ಭಾರತೀಯ ಚುನಾವಣಾ ಆಯೋಗವು ದೇಶಾದ್ಯಂತ ಹಮ್ಮಿಕೊಂಡಿರುವ ‘ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ’ ಪ್ರಕ್ರಿಯೆ ಪ್ರಕಾರ, ದೇಶದ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬರೋಬ್ಬರಿ 5.18 ಕೋಟಿಗೂ ಹೆಚ್ಚು ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಧಿಕೃತವಾಗಿ ಕೈಬಿಡಲಾಗಿದೆ.



