ಹೊಸದಿಗಂತ ವರದಿ, ಮೈಸೂರು:
ಕಾಶಿಯ ವಿಶ್ವೇಶ್ವರ ಮತ್ತು ಮಥುರಾ ಶ್ರೀ ಕೃಷ್ಣನ ದೇವಾಲಯಗಳು ಮುಂದಿನ ದಿನಗಳಲ್ಲಿ ಜ್ಞಾನವಾಪಿಯಾಗಬೇಕಿದೆ ಎಂದು ಲೇಖಕ ವಿಕ್ರಮ್ ಸಂಪತ್ ಹೇಳಿದರು.
ಬುಧವಾರ ಮೈಸೂರಿನ ಊಟಿ ರಸ್ತೆಯಲ್ಲಿರುವ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಆವಣರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಶಿ ವಿಶ್ವನಾಥ ಮಂದಿರದ ಕುರಿತ ತಾವೇ ರಚಿಸಿರುವ ಶಿವ ಪುಸ್ತಕ ಬಿಡುಗಡೆಗೊಂಡ ಬಳಿಕ ಅವರು ಮಾತನಾಡಿದ ಅವರು, ಹಲವು ಶತಮಾನಗಳಿಂದ ಹಿಂದುಗಳ ಕನಸಾಗಿದ್ದ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮಮಂದಿರ ನಿರ್ಮಾಣವಾಗಿ ಅಲ್ಲಿ ರಾಮಲಲಾ ಪ್ರತಿಷ್ಠಾಪನೆಯಾಗಿದೆ. ವಾರಣಾಸಿಯಲ್ಲಿರುವ ದೊಡ್ಡ ಮಸೀದಿ ಇರುವ ಜಾಗದಲ್ಲಿ ಮೊದಲು ವಿಶ್ವೇಶ್ವರನ ದೇವಾಲಯವಿತ್ತು. ಈ ಅಂಶವನ್ನು ಸರ್ವೋಚ್ಚ ನ್ಯಾಯಾಲಯವೇ ಎತ್ತಿ ಹಿಡಿದು, ಜ್ಞಾನವಾಪಿ ಜಾಗದಲ್ಲಿ ಪೂಜೆ ಸಲ್ಲಿಸಲು ಅನುಮತಿ ನೀಡಿದೆ ಎಂದು ಹೇಳಿದರು.
ಮುಸ್ಲಿಂ ದೊರೆಗಳ ಕಾಲದ ಆಳ್ವಿಕೆಯಲ್ಲಿ ವಿಶ್ವೇಶ್ವರನ ದೇಗುಲವನ್ನು ಹೊಡೆದು ಹಾಕುವ ಮೂಲಕ ಹಿಂದುಗಳ ಭಾವನೆಗೆ ಧಕ್ಕೆ ತರಲಾಯಿತು. ಅಲ್ಲಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರವೂ ಈ ದೇವಾಲಯ ಜ್ಞಾನವಾಪಿಯಾಗಲಿಲ್ಲ. ೧೯೯೩ರಲ್ಲಿ ವಿಶ್ವೇಶ್ವರನ ಜ್ಞಾನವಾಪಿ ಸ್ಥಳದಲ್ಲಿ ಓಡಾಟಕ್ಕೆ ಸರ್ವೋಚ್ಚ ನ್ಯಾಯಾಲಯ ತಡೆ ನೀಡಿತು. ಆದರೀಗ ಆ ನಿರ್ಬಂಧವನ್ನು ಹಿಂಪಡೆದು ಪೂಜೆ ಅವಕಾಶ ಕಲ್ಪಿಸಿರುವ ಭರವಸೆ ತಂದಿದೆ. ಮುಂದಿನ ದಿನಗಳಲ್ಲಿ ವಿಶ್ವೇಶ್ವರನ ದರ್ಶನವೂ ಆಗಲಿದೆ ಎಂದರು.
ಮೊಘಲರ ಆಳ್ವಿಕೆ, ಬಾಬಾರನ ದಂಡಯಾತ್ರೆಯಲ್ಲಿ ಹಲವು ಪುರಾತನ ಮತ್ತು ಮಹತ್ವವುಳ್ಳ ದೇವಸ್ಥಾನಗಳು ಧ್ವಂಸಗೊoಡಿವೆ. ಆದರೆ, ಕೆಲವು ಮಸೀದಿಗಳಲ್ಲಿ ದೇವಸ್ಥಾನದ ಕುರುಹುಗಳು, ಅವಶೇಷಗಳು, ಮಾದರಿಗಳು ಹಾಗೆಯೇ ಉಳಿದಿವೆ ಎಂದು ಹೇಳಿದರು.
ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಕಿರಿಯ ಶ್ರೀಗಳಾದ ವಿಜಯಾನಂದ ತೀರ್ಥ ಸ್ವಾಮೀಜಿ ಮಾತನಾಡಿ, ಅಯೋಧ್ಯೆ ರಾಮಮಂದಿರ ನಿರ್ಮಾಣದಂತೆ ಕಾಶಿ ಹಾಗೂ ಮಥುರದಲ್ಲಿಯೂ ಜ್ಞಾನವಾಪಿಯಾಗಿ ದೇವಾಲಯಗಳು ನಿರ್ಮಾಣವಾಗಬೇಕು ಎಂದರು.
೧೯೯೩ರಲ್ಲಿ ನನ್ನನ್ನು ಕಾಶಿಗೆ ಹೋಗುವಂತೆ ಹಿರಿಯ ಸ್ವಾಮೀಜಿಗಳು ಹೇಳಿದರು. ನಾನು ಹೋಗಿ ಬಂದ ಬಳಿಕ ಜ್ಞಾನವಾಪಿ ಸುತ್ತಮುತ್ತ ಪ್ರಾದಕ್ಷಿಣೆ ಹಾಕುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಯಿತು. ಇದು ಸ್ವಾಮೀಜಿ ಅವರಿಗೆ ಮೊದಲೇ ತಿಳಿದಿತ್ತು ಅನಿಸುತ್ತದೆ. ಹಾಗಾಗಿ, ನನ್ನನ್ನು ಒತ್ತಾಯ ಪೂರ್ವಕವಾಗಿ ಕಾಶಿಗೆ ಕಳುಹಿಸಿದರು. ಅಂದಿನಿoದ ವಿಶ್ವೇಶ್ವರನ ಜ್ಞಾನವಾಪಿಗೆ ಪೂಜೆ ಸಲ್ಲಿಸುತ್ತಿದ್ದಾರೆ ಎಂದರು.
೨೦೨೩ ರಲ್ಲಿ ವಾರಣಸಿಯ ಮಂದಿರ ಜ್ಞಾನವಾಪಿಗೆ ಪೂಜೆ ಸಲ್ಲಿಸುವಂತೆ ನ್ಯಾಯಾಲಯ ಆದೇಶ ನೀಡಿತು ಸಂತಸ ತಂದಿದೆ. ಮಥುರದಲ್ಲಿಯೂ ಇದೆ ಮಾದರಿಯಲ್ಲಿ ಶ್ರೀ ಕೃಷ್ಣನ ದೇವಾಲಯಕ್ಕೆ ಅನುಮತಿ ದೊರೆಯಬೇಕು ಎಂದು ಹೇಳಿದರು.
ಸಾನ್ನಿಧ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರು ಉದ್ಯೋಗ, ಹಣ ಸಂಪಾದನೆಯ ದೃಷ್ಟಿಯಿಂದ ಶಿಕ್ಷಣ ಕಲಿಯುತ್ತಿದ್ದಾರೆ. ಇದರೊಂದಿಗೆ ಮುಚ್ಚಿಲ್ಪಟ್ಟ ದೇಶದ ಇತಿಹಾಸ, ದೇವಾಲಯ ನಿರ್ಮಾಣದ ಉದ್ದೇಶಗಳ ಕುರಿತ ಇತಿಹಾಸ ಜ್ಞಾನ ಬೆಳೆಸಬೇಕು. ಹೀಗಾಗಿ ವಿದ್ಯಾರ್ಥಿಗಳು ವಿದ್ಯೆಯೊಂದಿಗೆ ಇತಿಹಾಸ ಅರಿವನ್ನು ಬೆಳೆಸಿಕೊಳ್ಳುವ ಮೂಲಕ ದೇಶದ ಸಂಸ್ಮತಿ-ಸoಸ್ಕಾರವನ್ನು ಅರಿಯಬೇಕಿದೆ. ಎಲ್ಲ ಕೋರಿಕೆ ಕೊನೆಯಲ್ಲಿ ಜ್ಞಾನ ಪ್ರಾಪ್ತಿಸುವಂತೆ ಪ್ರಾರ್ಥಿಸುತ್ತಾರೆ. ಜ್ಞಾನವೇ ಸಕಲ ಸಂಪತ್ತನ್ನು ವೃದ್ಧಿಸಲಿದೆ ಎಂದು ಹೇಳಿದರು. ದೇವರು ಸರ್ವ ವ್ಯಾಪಿ. ಆತನು ಎಲ್ಲ ಕಡೆಗಳಲ್ಲಿಯೂ ಇರುತ್ತಾನೆ. ಆದರೆ, ಜನರಿಂದ ರಕ್ಷಣೆಗಾಗಿ ದೇವಾಲಯಕ್ಕೆ ಭದ್ರತೆ ಒದಗಿಸಲಾಗಿರುತ್ತದೆ. ದೇವರ ಆಭರಣಗಳನ್ನು ಉಳಿಸಿಕೊಳ್ಳಲು, ಅಲ್ಲಿನ ಸಂಪ್ರಾದಾಯಕ್ಕೆ ತರುವ ಕೃತ್ಯಗಳು ನಡೆಯದಂತೆ ಎಚ್ಚರಿಕೆ ವಹಿಸಲು ಭದ್ರತೆ ಕಲ್ಪಿಸಲಾಗಿರುತ್ತದೆ. ಆದರೆ, ಜನ ದೇವರಿಗೆ ರಕ್ಷಣೆಗೆ ನೀಡುತ್ತಿದ್ದಾರೆ ಎಂದು ಭಾವಿಸುತ್ತಾರೆ ಎಂದು ಹೇಳಿದರು.
ಪುಸ್ತಕವನ್ನು ಶ್ರೀಗಣಪತಿ ಸಚ್ಚಿದಾನಂದಸ್ವಾಮಿಯವರು ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಕೆ.ಬಿ.ಗಣಪತಿ ಉಪಸ್ಥಿತರಿದ್ದರು.