ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಫೋಟಕ ಸಿಡಿತಲೆ ಹೊತ್ತು ಪಾಕಿಸ್ತಾನದಿಂದ ಭಾರತದ ಕಡೆ ಬರುತ್ತಿದ್ದ ಡ್ರೋನ್ವೊಂದನ್ನು ಹೊಡೆದುರುಳಿಸಿರುವುದಾಗಿ ಕಾಶ್ಮೀರ ಪೋಲೀಸರು ತಿಳಿಸಿದ್ದಾರೆ.
ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯ ಹೀರಾನಗರ ಸೆಕ್ಟರ್ನಲ್ಲಿ ಪಾಕಿಸ್ತಾನದ ಡ್ರೋನ್ ಅನ್ನು ಅಂತರಾಷ್ಟ್ರೀಯ ಗಡಿಯಲ್ಲಿ ಹೊಡೆದುರುಳಿಸಲಾಗಿದೆ. ಇದರಲ್ಲಿ ಮೂರು ಪ್ಯಾಕೆಟ್ ಸ್ಫೋಟಕಗಳಿದ್ದವು ಎಂದು ಹೇಳಲಾಗಿದೆ. ಗಡಿ ಭಾಗದಿಂದ ಬರುತ್ತಿದ್ದ ಇದನ್ನು ತಳ್ಳಿ ಹರಿಯ ಚಾಕ್ ಪ್ರದೇಶದಲ್ಲಿ ಹೊಡೆದುರುಳಿಸಲಾಗಿದೆ.
“ಎಂದಿನಂತೆ ಹುಡುಕಾಟದ ಸಮಯದಲ್ಲಿ ಶೋಧ ತಂಡದವರು ಗಡಿ ಭಾಗದಿಂದ ಡ್ರೋನ್ ಬರುತ್ತಿರುವುದನ್ನು ಗಮನಿಸಿ ಗುಂಡು ಹಾರಿಸಿದ್ದಾರೆ. ಡ್ರೋನ್ಗೆ ಮೂರು ಪ್ಯಾಕೆಟ್ಗಳ ಪೇಲೋಡ್ ಅಟ್ಯಾಚ್ಮೆಂಟ್ ಇದ್ದು ಇದನ್ನು ಬಾಂಬ್ ನಿಷ್ಕ್ರಿಯ ತಜ್ಞರು ಪರಿಶೀಲಿಸುತ್ತಿದ್ದಾರೆ” ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಖೇಶ್ ಸಿಂಗ್ ಹೇಳಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.