ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿಗೆ ಮತದಾನದ ಮೂಲಕ ಒಂದು ಸ್ಥಾನವನ್ನು ಗೆದ್ದು ಅಚ್ಚರಿ ಮೂಡಿಸಿದೆ. ಆಡಳಿತಾರೂಢ ಎನ್‌ಸಿ ಉಳಿದ ಮೂರು ಸ್ಥಾನಗಳನ್ನು ಗೆದ್ದು ಬೀಗಿದೆ.
370ನೇ ವಿಧಿ ರದ್ದುಪಡಿಸಿದ ನಂತರ, 2021ರಿಂದ ಖಾಲಿ ಇದ್ದ ಜಮ್ಮು ಮತ್ತು ಕಾಶ್ಮೀರದ ನಾಲ್ಕು ರಾಜ್ಯಸಭಾ ಸ್ಥಾನಗಳನ್ನು ಭರ್ತಿ ಮಾಡಲು ದ್ವೈವಾರ್ಷಿಕ ಚುನಾವಣೆ ನಡೆಯಿತು.
ಶಾಸಕರು ವಿಧಾನಸಭೆ ಸಂಕೀರ್ಣದಲ್ಲಿರುವ ಮೂರು ಪ್ರತ್ಯೇಕ ಮತಗಟ್ಟೆಗಳಲ್ಲಿ ತಮ್ಮ ಮತ ಚಲಾಯಿಸಿದರು. 90 ಸದಸ್ಯರನ್ನು ಹೊಂದಿರುವ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ, 89 ಶಾಸಕರು ಮತ ಚಲಾಯಿಸಿದರೆ, ಪೀಪಲ್ಸ್ ಕಾನ್ಫರೆನ್ಸ್ ಅಧ್ಯಕ್ಷ ಮತ್ತು ಶಾಸಕ ಸಜದ್ ಗನಿ ಲೋನ್ ಮತದಾನದಿಂದ ದೂರ ಉಳಿದರು. ಪಿಎಸ್ಎ ಅಡಿಯಲ್ಲಿ ಬಂಧಿತರಾಗಿ ಕಥುವಾ ಜೈಲಿನಲ್ಲಿರುವ ದೋಡಾದ ಎಎಪಿ ಶಾಸಕ ಮೆಹ್ರಾಜ್ ಮಲಿಕ್ ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಿದರು.
ಎನ್‌ಸಿ ನಾಲ್ಕು ಅಭ್ಯರ್ಥಿಗಳನ್ನು – ಚೌಧರಿ ಮುಹಮ್ಮದ್ ರಂಜಾನ್, ಶಮ್ಮಿ ಒಬೆರಾಯ್, ಸಜಾದ್ ಕಿಚ್ಲೂ ಮತ್ತು ಇಮ್ರಾನ್ ನಬಿ ದಾರ್ – ಕಣಕ್ಕಿಳಿಸಿತ್ತು. ಬಿಜೆಪಿ ಮೂರು ಸ್ಥಾನಗಳಿಗೆ ಅಲಿ ಮೊಹಮ್ಮದ್ ಮಿರ್, ರಾಕೇಶ್ ಮಹಾಜನ್ ಮತ್ತು ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಅಧ್ಯಕ್ಷ ಸತ್ ಶರ್ಮಾ ಅವರನ್ನು ಕಣಕ್ಕಿಳಿಸಿತ್ತು.
ಮೂರು ಸ್ಥಾನಗಳನ್ನು ಖಚಿತವಾಗಿ ಗೆಲ್ಲುವ ಸಾಮರ್ಥ್ಯ ಹೊಂದಿದ್ದ ಎನ್‌ಸಿ ಅವುಗಳನ್ನು ಪಡೆದುಕೊಂಡಿತು. ಆದರೆ ಬಿಜೆಪಿಯ ಸತ್ ಶರ್ಮಾ ನಾಲ್ಕನೇ ಸ್ಥಾನವನ್ನು ಗೆದ್ದರು.ಬಿಜೆಪಿಯ 28 ಮತಗಳ ವಿರುದ್ಧ, ಶರ್ಮಾ ಹೆಚ್ಚುವರಿ ಮತಗಳನ್ನು ಪಡೆದರು.

