ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಏಳೂ ಮೇಳಗಳ ತಿರುಗಾಟ ಮಂಗಳವಾರ ಸಂಪನ್ನಗೊಂಡಿತು.
ಸಂಜೆ 6 ಗಂಟೆಗೆ ದೇವರ ಚೌಕಿ ಪೂಜೆ ನಡೆದು ಯಕ್ಷಗಾನದ ಪೂರ್ವರಂಗವನ್ನು ಏಳೂ ಮೇಳಗಳ ಕಲಾವಿದರು ಪ್ರದರ್ಶಿಸಿದರು. ದೇವರು ರಂಗಸ್ಥಳಕ್ಕೆ ಬಂದಾಗ ಧನ್ಯರಾದ ಭಕ್ತಸಮೂಹ ಕಟೀಲು ರಥಬೀದಿಯಲ್ಲಿ ಉತ್ಸವದ ವಾತಾವರಣವನ್ನು ಸೃಷ್ಟಿಸಿತು. ಏಳೂ ಮೇಳಗಳ ಕಲಾವಿದರು ಸಪ್ತ ಕಲ್ಯಾಣವನ್ನು ಪ್ರದರ್ಶಿಸಿದರು.
ಶಶಿ ಪ್ರಭೆ, ದ್ರೌಪದಿ, ಸುಭದ್ರೆ, ಸ್ವಯಂ ಪ್ರಭೆ, ಶಿವಪ್ರಭೆ, ರತಿ ಹಾಗೂ ಪದ್ಮಾವತಿ ಪ್ರಸಂಗಗಳನ್ನು ಪ್ರದರ್ಶಿಸಿದ ಕಲಾವಿದರು ಬುಧವಾರ ಬೆಳಿಗ್ಗೆ ಮಂಗಳದ ಬಳಿಕ ದೇವರ ಎದುರು ಗೆಜ್ಜೆ ಬಿಚ್ಚಲಿದ್ದಾರೆ.
ಕಟೀಲಿನ ರಥಬೀದಿಯಲ್ಲಿ ಏಳೂ ಮೇಳಗಳ ದೇವರ ಪ್ರಸಾದವನ್ನು ಸಹಸ್ರಾರು ಕಲಾಭಿಮಾನಿಗಳು ಸ್ವೀಕರಿಸಿ ಧನ್ಯರಾದರು.
ಡಿಸೆಂಬರ್ 3 ರಂದು ಮುಂದಿನ ತಿರುಗಾಟದ ಆರಂಭ
ಈ ಬಾರಿ ಏಳನೆಯ ಮೇಳದ ಉದ್ಘಾಟನೆಯೊಂದಿಗೆ ಕಟೀಲು ಮೇಳಗಳು ತಿರುಗಾಟ ಆರಂಭಿಸಿದ್ದು, 720 ದೇವಿ ಮಹಾತ್ಮೆ ಪ್ರಸಂಗವನ್ನು ಪ್ರದರ್ಶಿಸಿವೆ. ಕಟೀಲು ದೇಗುಲದ ಪರಿಸರದಲ್ಲಿ ಹೆಚ್ಚು ಸೇವೆಯಾಟಗಳು ನಡೆದಿದ್ದು, ಹೊಸ ಪ್ರಸಂಗಗಳು ಹೆಚ್ಚು ಪ್ರದರ್ಶಿತವಾಗಿವೆ. ಮುಂದಿನ ತಿರುಗಾಟದ ಆರಂಭ ಡಿಸೆಂಬರ್ 3 ರಂದು ನಡೆಯಲಿದೆ.

ಕಟೀಲು ಮೇಳಗಳು ಒಂದು ರೀತಿಯಲ್ಲಿ ಹೊಸಬರಿಗೆ ಕಲಿಕಾ ಕೇಂದ್ರಗಳೂ ಹೌದು. ಇಪ್ಪತ್ತಕ್ಕೂ ಹೆಚ್ಚು ಮಕ್ಕಳು ಹಿಮ್ಮೇಳ ಮುಮ್ಮೇಳಗಳಲ್ಲಿ ಸೇವೆ ನೀಡಿದ್ದಾರೆ. ಐನೂರಕ್ಕೂ ಹೆಚ್ಚು ಸೇವೆಯಾಟಗಳು ಯುಟ್ಯೂಬ್ ಗಳಲ್ಲಿ ಪ್ರದರ್ಶಿತವಾಗಿವೆ. ಪರಿಣಾಮ ದಿನಂಪ್ರತಿ ಸಾವಿರಾರು ಮಂದಿ ದೇಶ ವಿದೇಶಗಳಲ್ಲೂ ಯಕ್ಷಗಾನ ವೀಕ್ಷಿಸಿದ್ದಾರೆ.
ಆಸಕ್ತ ಕಲಾವಿದರಿಗೆ ತಾಳಮದ್ದಲೆ ಸಪ್ತಾಹ
ಕಟೀಲು ಮೇಳಗಳ ಕಲಾವಿದರಿಗೆ ಚಟುವಟಿಕೆಗಳು ಮಳೆಗಾಲದಲ್ಲೂ ನಾನಾ ರೀತಿಯಲ್ಲಿ ಮುಂದುವರಿಯಲಿವೆ. ಆಸಕ್ತ ಕಲಾವಿದರಿಗೆ ತಾಳಮದ್ದಲೆ ಸಪ್ತಾಹ ಜೂನ್ 8ರಿಂದ ಕಟೀಲಿನಲ್ಲಿ ನಡೆಯಲಿದೆ. ಅಭ್ಯಾಸ ಕಾರ್ಯಾಗಾರಗಳು ಕಳೆದ ವರ್ಷದಂತೆ ಈ ವರ್ಷವೂ ನಡೆಯಲಿದೆ.
ದೇವಸ್ಥಾನದ ವಿನಂತಿಗೆ ಭಕ್ತರ ಸ್ಪಂದನೆ
ಕಟೀಲಿನ ಸೇವೆಗಳಲ್ಲಿ ಈ ವರ್ಷ ಪಟಾಕಿ ಸಿಡಿಸುವುದು ದೇವರು ರಂಗಸ್ಥಳಕ್ಕೆ ಬರುವಲ್ಲಿವರೆಗೆ ಮಾತ್ರ ಎಂದು ನಿಯಮ ಮಾಡಿದ್ದು, ಸಾಧ್ಯವಾದಷ್ಟರ ಮಟ್ಟಿಗೆ ಜಾರಿಗೆ ಬಂದಿದೆ ಎಂದು ಕಲಾವಿದರ ಅಭಿಪ್ರಾಯ. ಅನ್ನ ಪ್ರಸಾದ ಇತ್ಯಾದಿ ಸಂದರ್ಭ ಏಕ ಬಳಕೆಯ ಪ್ಲಾಸ್ಟಿಕ್ ಕಡಿಮೆ ಮಾಡಬೇಕೆಂಬ ದೇವಸ್ಥಾನದ ವಿನಂತಿಗೆ ಸಾಕಷ್ಟು ಭಕ್ತರು ಸ್ಪಂದಿಸಿದ್ದಾರೆ. ವಾದ್ಯ ಬ್ಯಾಂಡ್ ಇಲ್ಲದೆ ಆಟವನ್ನು ಸಾಂಪ್ರದಾಯಿಕವಾಗಿ ನಡೆಸಲು ಅನೇಕ ಭಕ್ತರು ಮನಸ್ಸು ಮಾಡಿದ್ದಾರೆ. ಹೀಗೆ ಕಲೆಯ ಆಶಯ ಹರಕೆ ಸೇವೆಯಾಟ ವೈಭವದ ಹೆಸರಿನಲ್ಲಿ ಹಾಡಿ ತಪ್ಪದಂತೆ ದೇಗುಲ ಹಾಗೂ ಮೇಳದ ಆಡಳಿತ ತೆಗೆದುಕೊಂಡಿರುವ ನಿರ್ಧಾರಗಳಿಗೆ ಸಾಕಷ್ಟು ಭಕ್ತರು ಸ್ಪಂದಿಸಿದ್ದಾರೆ.

ಒಂದು ಸಾವಿರದಷ್ಟು ಸೇವೆಯಾಟಗಳ ಬುಕ್ಕಿಂಗ್
ಪ್ರತಿ ಯಕ್ಷಗಾನ ಸೇವೆಯಾಟಕ್ಕೆ ಕನಿಷ್ಠ ಒಂದು ಲಕ್ಷ ರೂಪಾಯಿ ವೆಚ್ಚ ಆಗುತ್ತದೆ. ಭಕ್ತರು ತಮ್ಮ ಮನೆಗೆ ಕಟೀಲಮ್ಮನೆ ಬರುತ್ತಾಳೆ ಎಂಬ ನಂಬಿಕೆಯಿಂದ ಸೇವೆಯಾಟವನ್ನು ಅತ್ಯಂತ ಸಂಭ್ರಮದಿಂದ ಮಾಡುತ್ತಾರೆ. ಊಟ ಇತ್ಯಾದಿ ಒಂದಿಷ್ಟು ಗೌಜಿ ಮಾಡುವುದರಿಂದ ಐದಾರು ಲಕ್ಷ ರೂಪಾಯಿ ಖರ್ಚು ಮಾಡಿದವರೂ ಇದ್ದಾರೆ. ವರ್ಷಂಪ್ರತಿ ಸೇವೆಯಾಟ ಆಡಿಸುವ ಭಕ್ತರೂ ನೂರಕ್ಕೂ ಮಿಕ್ಕಿ ಇದ್ದಾರೆ. ನಾಲ್ಕು ನೂರರಷ್ಟು ಕಟೀಲು ಮೇಳಗಳ ಆಟ ಆಡಿಸುವ ಹತ್ತು ಸಮಸ್ತರ ಸಮಿತಿಗಳಿವೆ. ಹೀಗೆ 500ಕ್ಕಿಂತಲೂ ಹೆಚ್ಚು ಖಾಯಂ ಸೇವೆಯಾಟಗಳು ಇವೆ. ಈ ವರ್ಷ ಒಂದು ಸಾವಿರದಷ್ಟು ಸೇವೆಯಾಟಗಳು ಬುಕ್ಕಿಂಗ್ ಆಗಿವೆ.
189 ದಿನಗಳಲ್ಲಿ 1323 ಸೇವೆಯಾಟಗಳು
ಮೇಳಗಳ ತಿರುಗಾಟ ಆರಂಭವಾದುದು ನವೆಂಬರ್ 16ಕ್ಕೆ. 189 ದಿನಗಳಲ್ಲಿ 1323 ಸೇವೆಯಾಟಗಳು. ಚರ್ಮುರಿ ಅಂಗಡಿ, ಕೇಟರಿಂಗ್, ಆಮಂತ್ರಣ ಪತ್ರಿಕೆ ಬೇನರ್ ಮುದ್ರಕರು, ಶಾಮಿಯಾನದವರು, ಹೂವಿನ ವ್ಯಾಪಾರಿಗಳು ಹೀಗೆ ನಾನಾ ವಿಧದ ವಹಿವಾಟು ಒಂದು ಯಕ್ಷಗಾನದ ನೆಪದಲ್ಲಿ ನಡೆದು 1ರಿಂದ 2 ಲಕ್ಷ ಹಣದ ವ್ಯವಹಾರ ಎಂದು ಲೆಕ್ಕ ಹಾಕಿದರೂ 25ರಿಂದ 35 ಕೋಟಿ ರೂಪಾಯಿ ವಹಿವಾಟು. 350ಕ್ಕೂ ಹೆಚ್ಚು ಕಲಾವಿದರು, ಕೆಲಸಗಾರರಿಗೆ ಉದ್ಯೋಗ ಜೊತೆಗೆ ಯಕ್ಷಗಾನ ಪ್ರದರ್ಶನದ ಮೂಲಕ ಸಂಸ್ಕೃತಿ ಪುರಾಣದ ತಿಳುವಳಿಕೆಯ ಪ್ರಚಾರ, ಕನ್ನಡದ ಕೆಲಸ ಹೀಗೆ ಕಟೀಲು ಮೇಳಗಳ ಕೊಡುಗೆ ದೊಡ್ಡದು.



