ಹೊಸದಿಗಂತ ವರದಿ, ಮುಂಬೈ:
ಬಾಲಿವುಡ್ ನ ತಾರಾ ದಂಪತಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಅವರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಜೀವ ಬೆದರಿಕೆ ಹಾಕಿದ್ದ ವ್ಯಕ್ತಿಯೊಬ್ಬನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ತಮಗೆ ಜೀವ ಬೆದರಿಕೆಗಳು ಬರುತ್ತಿವೆ ಎಂದು ದಂಪತಿ ದೂರು ನೀಡಿದ್ದರು. ಈ ಬಗ್ಗೆ ತಕ್ಷಣವೇ ಕ್ರಮವಹಿಸಿದ ಮುಂಬೈನ ಸಾಂತಾಕ್ರೂಜ್ ಪೊಲೀಸರು ಮನ್ವಿಂದರ್ ಸಿಂಗ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಲಕ್ನೋ ಮೂಲದ ಆರೋಪಿ ಮುಂಬೈನಲ್ಲಿ ಚಲನಚಿತ್ರಗಳು ಮತ್ತು ಟಿವಿ ಸೀರಿಯಲ್ ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಅಚ್ಚರಿಯ ವಿಚಾರವೆಂದರೆ, ಆರೋಪಿ ನಟಿ ಕತ್ರಿನಾ ಕೈಫ್ ರ ಅಪ್ಪಟ ಅಭಿಮಾನಿಯಾಗಿದ್ದ. ಆಕೆಯನ್ನು ಎಲ್ಲೆಡೆ ಹಿಂಬಾಲಿಸುತ್ತಿದ್ದ. ಆದರೆ ಇನ್‌ಸ್ಟಾಗ್ರಾಮ್‌ನಲ್ಲಿ ಕತ್ರಿನಾ ದಂಪತಿಗೆ ಬೆದರಿಕೆ ಒಡ್ಡಿದ್ದು ಏಕೆ ಎಂಬ ವಿಚಾರ ತಿಳಿದುಬಂದಿಲ್ಲ. ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 506-II (ಕ್ರಿಮಿನಲ್ ಬೆದರಿಕೆ) ಮತ್ತು 354-ಡಿ (ಹಿಂಬಾಲಿಸುವಿಕೆ) ಅಡಿಯಲ್ಲಿ ಆತನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ