ಹೊಸದಿಗಂತ ವರದಿ, ಮಂಡ್ಯ:
ಕಾವೇರಿ, ಕಬಿನಿ, ಹಾರಂಗಿ ನೀರಾವರಿ ಯೋಜನೆ ಆಧುನೀಕರಣಕ್ಕಾಗಿ 480 ಕೋಟಿ ರೂ. ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಕಾವೇರಿ ಮಾತೆಗೆ ಬಾಗಿನ ಅರ್ಪಿಸಿದ ಬಳಿಕ ಮಾತನಾಡಿದ ಅವರು, ಕಾವೇರಿ ತಾಯಿ ಈ ಭಾಗದ ಜೀವನದಿ. ಈ ಭಾಗದ ಭಾಗ್ಯದ ಬಾಗಿಲು ತೆಗೆದ ತಾಯಿ. ಮೈಸೂರಿನ ಮಹಾರಾಜರು ಈ ಕನ್ನಂಬಾಡಿ ಅಣೆಕಟ್ಟೆಯನ್ನು ಕಟ್ಟಿದ್ದಾರೆ. ಅವರ ಶ್ರಮ, ತ್ಯಾಗ ಮರೆಯಲು ಸಾಧ್ಯವಿಲ್ಲಘಿ. ಇದರೊಂದಿಗೆ ವಿಶ್ವೇಶ್ವರಯ್ಯನವರನ್ನೂ ನೆನೆಯಬೇಕು ಎಂದು ಹೇಳಿದರು.
ನಾನು ನೀರಾವರಿ ಸಚಿವನಾಗಿದ್ದಾಗ ಇಲ್ಲಿಗೆ ಬಂದಿದ್ದೆ, ಆಗ ಕೃಷ್ಣರಾಜಸಾಗರ ಜಲಾಶಯದ ಹಳೇ ಗೇಟ್‌ಗಳು ಸಂಪೂರ್ಣ ಹಾಳಾಗಿದ್ದವು. ಇದರಿಂದ ಸಾಕಷ್ಟು ನೀರು ಪೋಲಾಗುತ್ತಿತ್ತು. ಅದನ್ನು ನೋಡಿ ನನಗೆ ನಿದ್ದೆಯೇ ಬರಲಿಲ್ಲಘಿ. ತಕ್ಷಣ ಆ ಗೇಟ್‌ಗಳ ಬದಲಾವಣೆಗೆ ನಿರ್ಧಾರ ಮಾಡಿದೆ. ಅದರಂತೆ ಮೊದಲು 16 ಗೇಟ್‌ಗಳ ದುರಸ್ಥಿ ಮಾಡಿಸಿದೆ. ಇನ್ನೂ 61 ಗೇಟ್‌ಗಳನ್ನು ಬದಲಾವಣೆ ಮಾಡಬೇಕಿದೆ. ಇದಕ್ಕೆ 150 ಕೋಟಿ ವೆಚ್ಚವಾಗುತ್ತಿದೆ. ಒಂದೂವರೆ ವರ್ಷದಲ್ಲಿ ಎಲ್ಲ ಗೇಟ್‌ಗಳನ್ನು ಬದಲಾವಣೆ ಮಾಡಿ ಕೆ.ಆರ್.ಎಸ್.ನ 75 ವರ್ಷದ ಅಮೃತ ಮಹೋತ್ಸವ ಆಚರಿಸುವುದಾಗಿ ಭರವಸೆ ನೀಡಿದರು.
ನಾಲೆಗಳ ಆಧುನೀಕರಣವನ್ನು ಮಾಡುತ್ತೇವೆ. ಕೊನೇ ಭಾಗದ ರೈತರಿಗೂ ನೀರು ತಲುಪಿಸುವುದು ನಮ್ಮ ಗುರಿಯಾಗಿದೆ. ಒಟ್ಟಾರೆ ಈ ಭಾಗದ ನೀರಾವರಿ ಯೋಜನೆಗೆ ಒತ್ತು ನೀಡುವುದಾಗಿ ಅವರು ತಿಳಿಸಿದರು.