ಹೊಸದಿಗಂತ ವರದಿ ಮಡಿಕೇರಿ:
ಬ್ರಹ್ಮಗಿರಿ ತಪ್ಪಲಿನಲ್ಲಿರುವ ಪವಿತ್ರ ತೀರ್ಥಕ್ಷೇತ್ರ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಬುಧವಾರ ಮಧ್ಯರಾತ್ರಿ 1.26ಕ್ಕೆ ಸಲ್ಲುವ ಕರ್ಕಾಟಕ ಲಗ್ನದಲ್ಲಿ ಮಾತೆ ಕಾವೇರಿಯು ತೀರ್ಥರೂಪಿಣಿಯಾಗಿ ಗೋಚರಿಸುವ ಮೂಲಕ ನೆರೆದಿದ್ದ ಭಕ್ತರನ್ನು ಪುಳಕಿತರನ್ನಾಗಿಸಿದಳು.
ಸೂರ್ಯನು ತುಲಾ ರಾಶಿಯನ್ನು ಪ್ರವೇಶಿಸುವ ಸಂಕ್ರಮಣದಂದು ಬುಧವಾರ ಮಧ್ಯರಾತ್ರಿ 1.27ಕ್ಕೆ ತೀರ್ಥೋದ್ಭವವಾಗಲಿರುವುದಾಗಿ ತಿಳಿಸಲಾಗಿತ್ತಾದರೂ, ಕೊರೆವ ಚಳಿಯಲ್ಲೂ ಕಾವೇರಮ್ಮನ ದರುಶನಕ್ಕಾಗಿ ಕಾದು ನಿಂತ ಭಕ್ತರಿಗೆ ಒಂದು ನಿಮಿಷ ಮುಂಚಿತವಾಗಿಯೇ ದರುಶನ ಭಾಗ್ಯ ಕರುಣಿಸಿದಳು.
ಅರ್ಚಕರ ವೇದಮಂತ್ರ, ನೆರೆದಿದ್ದ ಸಹಸ್ರಾರು ಭಕ್ತ ಜನರ ‘ಜೈ ಜೈ ಮಾತಾ ಕಾವೇರಿ ಮಾತಾ, ಉಕ್ಕಿ ಬಾ ಉಕ್ಕಿ ಬಾ ಕಾವೇರಮ್ಮ ಉಕ್ಕಿ ಬಾ’ ಎಂಬ ಜಯಘೋಷಗಳ ನಡುವೆ ಬ್ರಹ್ಮಕುಂಡಿಕೆಯಲ್ಲಿ ಕಾವೇರಿಯು ತೀರ್ಥರೂಪಿಣಿಯಾಗಿ ಗೋಚರಿಸುತ್ತಿದ್ದಂತೆ ತಲಕಾವೇರಿ ಕ್ಷೇತ್ರದಲ್ಲಿ ಸೇರಿದ್ದ ಭಕ್ತರು ಭಾವಪರವಶರಾದರು.
ತೀರ್ಥೋದ್ಭವವಾಗುತ್ತಿದಂತೆ ಅರ್ಚಕರು ಪವಿತ್ರ ತೀರ್ಥನ್ನು ಭಕ್ತಾದಿಗಳ ಮೇಲೆ ಪ್ರೋಕ್ಷಣೆ ಮಾಡಿದರು. ನಡುರಾತ್ರಿಯ ಕೊರೆಯುವ ಚಳಿಯ ನಡುವೆಯೂ ಕಾವೇರಿ ತೀರ್ಥೋದ್ಭವಕ್ಕೆ ಕೊಡಗಿನ ವಿವಿಧೆಡೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರಿಗೆ ಜಿಲ್ಲಾಡಳಿತದ ವತಿಯಿಂದ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು.
ಭಾಗಮಂಡಲದಿಂದ ತಲಕಾವೇರಿಗೆ ತೆರಳುವ ರಸ್ತೆಯ ಇಕ್ಕೆಲಗಳಲ್ಲೂ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿತ್ತು. ಅಂತೆಯೇ ಸರಕಾರಿ ಬಸ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು. ಕಾವೇರಿ ಕ್ಷೇತ್ರದಲ್ಲೀಗ ಹಬ್ಬದ ಸಂಭ್ರಮ ಕಳೆಗಟ್ಟಿದ್ದು, ಮುಂದಿನ ಒಂದು ತಿಂಗಳ ಕಾಲ ಜಾತ್ರೆ ನಡೆಯಲಿದೆ. ಈ ಅವಧಿಯಲ್ಲಿ ಕೊಡಗು ಏಕೀಕರಣ ರಂಗದಿಂದ ಸಹಸ್ರಾರು ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ.