ಹೊಸದಿಗಂತ ಡಿಜಿಟಲ್ ಡೆಸ್ಕ್:
ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ಕರ್ನಾಟಕ ಪರೀಕ್ಷ ಪ್ರಾಧಿಕಾರ (ಕೆಇಎ) ನಡೆಸುವ ʻಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆʼಯಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಶಾಲಾ, ಕಾಲೇಜು ವಿವರಗಳಲ್ಲಿ ಏನಾದರು ತಪ್ಪುಗಳಿದ್ದರೆ ತಿದ್ದುಪಡಿ ಮಾಡಿಕೊಳ್ಳಲು ಅವಕಾಶವನ್ನು ನೀಡಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಕೆಇಎ, ಅಭ್ಯರ್ಥಿಗಳಿಗೆ ಶಾಲಾ, ಕಾಲೇಜು ವಿವರಗಳಲ್ಲಿ ಏನಾದರು ತಪ್ಪುಗಳಾಗಿದ್ದರೆ, ತಿದ್ದುಪಡಿ ಮಾಡಿಕೊಳ್ಳಲು ಅವಕಾಶವನ್ನು ನೀಡಲಾಗಿದ್ದು, ದಿನಾಂಕ 27-06-2023 ರಿಂದ 15-07-2023ರ ವರೆಗೆ ತಿದ್ದುಪಡಿ ಮಾಡಬಹುದು ಎಂದು ಹೇಳಿದೆ.
ವ್ಯಾಸಂಗ ಪ್ರಮಾಣ ಪತ್ರ, ಕನ್ನಡ ಮಾಧ್ಯಮ ವ್ಯಾಸಂಗ ಪ್ರಮಾಣ ಪತ್ರ, ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರ, 12ನೇ ತರಗತಿಯ ಅಂಕಗಳ ಪರಿಶೀಲನೆಗೆ ಸಂಬಂಧಿಸಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ”ಎ” ಅರ್ಹತಾ ಕಂಡಿಕೆಯನ್ನು ಕ್ಲೇಮ್ ಮಾಡಿರುವ ಅಭ್ಯರ್ಥಿಗಳು ಪರಿಶೀಲನೆಗೆ ಹಾಜರಾಗಲು ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಯುಜಿಸಿಇಟಿ-2023ರ ಆನ್‌ಲೈನ್ ಅರ್ಜಿಯಲ್ಲಿ ಅಭ್ಯರ್ಥಿಗಳು ದಾಖಲಿಸಿರುವ ಶಾಲೆ / ಕಾಲೇಜಿಗಳಲ್ಲಿನ ವ್ಯಾಸಂಗ, ಅವಧಿ, ತೇರ್ಗಡೆ ವರ್ಷ, ಇತ್ಯಾದಿ ವಿವರವನ್ನು ಆಧರಿಸಿ ಬಿಇಒ ಪರಿಶೀಲಿಸುತ್ತಾರೆ. ಒಂದು ವೇಳೆ ಅಭ್ಯರ್ಥಿಗಳು ನಮೂದಿಸಿರುವ ಶಾಲೆ / ಕಾಲೇಜುಗಳಲ್ಲಿನ ವ್ಯಾಸಂಗ, ಅವಧಿ, ತೇರ್ಗಡೆ ವರ್ಷ ಹಾಗು ಅರ್ಹತಾ ಕಂಡಿಕೆ ವಿವರಗಳಿಗೆ ತಿದ್ದುಪಡಿ ಅವಶ್ಯವಿದ್ದಲ್ಲಿ ಅಭ್ಯರ್ಥಿಗಳು ಪ್ರಾಧಿಕಾರದ ಪೋರ್ಟಲ್‌ನಲ್ಲಿ ನಿಗದಿತ ಲಿಂಕ್ ಬಳಸಿ ತಿದ್ದುಪಡಿ ಮಾಡಬಹುದು. ಇತರೆ ಯಾವುದೇ ಮಾಹಿತಿಯನ್ನು ತಿದ್ದುಪಡಿ ಮಾಡಲು ಅವಕಾಶ ಇರುವುದಿಲ್ಲ.
ಬಿಇಒ ಕಚೇರಿಯಲ್ಲಿ ದಾಖಲಾತಿ ಪರಿಶೀಲನೆ ಮಾಡುವ ಮೊದಲು ಶಾಲೆ/ಕಾಲೆಜುಗಳ ವಿವರಗಳ ತಿದ್ದುಪಡಿಯನ್ನು ಮಾಡಿಕೊಳ್ಳತಕ್ಕದ್ದು. ಬಿಇಒ ಕಚೇರಿಯ ಪರಿಶೀಲನೆ ನಂತರ ಶಾಲೆ/ಕಾಲೇಜುಗಳ ತಿದ್ದುಪಡಿಗೆ ಅವಕಾಶ ಇರುವುದಿಲ್ಲ.
ಅರ್ಹತಾ ಕಂಡಿಕೆ ‘ಎ’ ಷರತ್ತುಗಳನ್ನು ಪೂರೈಸುವ ಅಭ್ಯರ್ಥಿಗಳು ಇತರ ಅರ್ಹತಾ ಕಂಡಿಕೆಯನ್ನು ಕ್ಲೇಮ್ ಮಾಡಿದ್ದಲ್ಲಿ ‘ಎ’ ಅರ್ಹತಾ ಕಂಡಿಕೆಯನ್ನು ಮಾತ್ರ ಕ್ಲೇಮ್ ಮಾಡಬಹುದು.