ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಇಎ (KEA) ಪರೀಕ್ಷೆಯಲ್ಲಿ ಹಿಜಾಬ್ (Hijab) ಧರಿಸಿ ಪರೀಕ್ಷೆ ಬರೆಯಲು ಸರಕಾರ ಅವಕಾಶ ಕೊಟ್ಟಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ.
ನವೆಂಬರ್ 18 ಮತ್ತು 19ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ವಿವಿಧ ನಿಗಮ-ಮಂಡಳಿಗಳ ಪರೀಕ್ಷೆಗೆ ಅಭ್ಯರ್ಥಿಗಳು ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡಿದೆ.
ಮೊದಲ ಹಂತದ ಪರೀಕ್ಷೆ ವೇಳೆಯೂ ಹಿಜಾಬ್ ಅವಕಾಶ ಕೊಟ್ಟಿದ್ದ ಕೆಇಎ ನಿರ್ಧಾರಕ್ಕೆ ಹಿಂದುಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಪ್ರತಿಭಟನೆ ಕೂಡ ನಡೆಸಿದ್ದವು. ಈ ಎಲ್ಲಾ ವಿರೋಧದ ಬಳಿಕವೂ ಎರಡನೇ ಹಂತದ ನಿಗಮ-ಮಂಡಳಿ ಪರೀಕ್ಷೆಗೆ ಕೆಇಎ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಿದೆ.
ಈ ಸಂಬಂಧ ಕೆಇಎ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗಿದೆ. ಹಿಜಾಬ್ ಧರಿಸುವ ಅಭ್ಯರ್ಥಿಗಳು ಪರೀಕ್ಷೆ ಪ್ರಾರಂಭವಾಗುವ ಎರಡು ಗಂಟೆ ಮೊದಲು ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ ತಪಾಸಣೆ ಮಾಡಿಸಿಕೊಳ್ಳುವಂತೆ ಕೆಇಎ ಸೂಚನೆ ನೀಡಿದೆ.
ಕೆಇಎ ಡ್ರೆಸ್ ಕೋಡ್ ರೂಲ್ಸ್ ಏನು?
- ಪರೀಕ್ಷೆಯ ದಿನದಂದು ತುಂಬು ತೋಳಿನ ಶರ್ಟ್ ಧರಿಸುವಂತಿಲ್ಲ.
- ಅಭ್ಯರ್ಥಿಗಳಿಗೆ ಜೇಬು ಇಲ್ಲದ ಅಥವಾ ಕಡಿಮೆ ಜೇಬಿರುವ ಪ್ಯಾಂಟ್ ಧರಿಸಿ ಪರೀಕ್ಷೆಗೆ ಹಾಜರಾಗಬೇಕು.
- ಕುರ್ತಾ ಪೈಜಾಮ, ಜೀನ್ಸ್ ಪ್ಯಾಂಟ್ ಧರಿಸಿ ಪರೀಕ್ಷೆಗೆ ಹಾಜರಾಗಲು ಅವಕಾಶ ಇರುವುದಿಲ್ಲ.
- ಧರಿಸುವ ಬಟ್ಟೆಗಳು ಹಗುರವಾಗಿದ್ದು ದೊಡ್ಡ ಎಂಬ್ರಾಯಿಡರಿ, ಜಿಪ್ ಪಾಕೆಟ್‌ಗಳು, ದೊಡ್ಡ ಬಟನ್‌ಗಳು ಇರಬಾರದು.
- ಅಭ್ಯರ್ಥಿಗಳು ಶೂ ಹಾಕಿಕೊಂಡು ಪರೀಕ್ಷೆಗೆ ಹಾಜರಾಗುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
- ಹೀಲ್ಡ್ ಇಲ್ಲದ ತೆಳುವಾದ ಅಡಿಭಾಗ ಇರುವ ಚಪ್ಪಲಿಗಳನ್ನು ಧರಿಸುವುದು ಸೂಕ್ತ.
- ಮಹಿಳಾ ಅಭ್ಯರ್ಥಿಗಳಿಗೆ ಮಂಗಳಸೂತ್ರ ಮತ್ತು ಕಾಲುಂಗುರ ಮಾತ್ರ ಅವಕಾಶ.
- ಯಾವುದೇ ಅಭ್ಯರ್ಥಿಯು ಕುತ್ತಿಗೆಯ ಸುತ್ತ ಲೋಹದ ಆಭರಣ ಧರಿಸುವುದು, ಅಥವಾ ಕಿವಿಯೋಲೆ, ಉಂಗುರ, ಕಡಗ ಧರಿಸುವುದ ನಿರ್ಬಂಧ.
- ಬ್ಲೂಟೂತ್ ಸಾಧನ ಬಳಕೆಗೆ ಆಸ್ಪದವಾಗಬಾರದೆಂದು ತಲೆಯ ಮೇಲೆ ಟೋಪಿ ಅಥವಾ ಯಾವುದೇ ವಸ್ತ್ರ ಧರಿಸುವುದಕ್ಕೆ ನಿರ್ಬಂಧ.
- ಅಂತಯೇ, ಬಾಯಿ, ಕಿವಿ ಹಾಗೂ ತಲೆ ಮುಚ್ಚುವ ರೀತಿಯಲ್ಲಿ ಯಾವುದೇ ವಸ್ತ್ರ ಧರಿಸುವುದನ್ನು ನಿಷೇಧ.
- ಯಾವುದೇ ರೀತಿಯ ಮಾಸ್ಕ್ ಸಹ ಧರಿಸುವಂತಿಲ್ಲ.
- ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್ ಫೋನ್, ಪೆನ್ ಡ್ರೈವ್, ಇಯರ್ ಫೋನ್, ಮೈಕ್ರೋಫೋನ್, ಮತ್ತು ಕೈಗಡಿಯಾರಗಳನ್ನು ಕೊಂಡೊಯ್ಯುವಂತಿಲ್ಲ.
- ಪರೀಕ್ಷಾ ಕೊಠಡಿ ಒಳಕ್ಕೆ ತಿನ್ನುವ ಪದಾರ್ಥ ತೆಗೆದುಕೊಂಡು ಹೋಗುವಂತಿಲ್ಲ.
- ಪೆನ್ಸಿಲ್, ಪೇಪರ್, ಎರೇಸರ್, ಜಾಮಿಟ್ರಿ ಬಾಕ್ಸ್ ಮತ್ತು ಲಾಗ್ ಟೇಬಲ್ ಗಳನ್ನು ಪರೀಕ್ಷಾ ಕೇಂದ್ರದೊಳಕ್ಕೆ ತೆಗೆದುಕೊಂಡು ಹೋಗುವಂತಿಲ್ಲ.