ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಾ. ಬಿ.ಆರ್ ಅಂಬೇಡ್ಕರ್ ಅವರ ವಿಚಾರಕ್ಕೆ ರಾಜಕೀಯ ಗದ್ದಲ ಜೋರಾಗಿದ್ದು, ಈ ಹೊತ್ತಲ್ಲೇ ದಲಿತ ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಅವರ ಹೆಸರಿನ ವಿದ್ಯಾರ್ಥಿ ವೇತನ ಯೋಜನೆಯನ್ನು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.
ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆ ಪ್ರಚಾರ ನಡೆಸುತ್ತಿರುವ ಕೇಜ್ರಿವಾಲ್ , ಸಂವಿಧಾನದ ಪಿತಾಮಹ ಬಾಬಾ ಸಾಹೇಬರ ವಿರುದ್ಧ ಅಮಿತ್ ಶಾ ಅವರ “ಅಗೌರವ” ಹೇಳಿಕೆಗೆ ಪ್ರತಿಕ್ರಿಯೆಯಾಗಿ “ಡಾ.ಅಂಬೇಡ್ಕರ್ ಸಮ್ಮಾನ್” ವಿದ್ಯಾರ್ಥಿ ವೇತನವನ್ನು ಪ್ರಾರಂಭಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಎಎಪಿ (AAP) ಗೆದ್ದರೆ ವಿದೇಶಿ ವಿಶ್ವವಿದ್ಯಾಲಯಗಳಿಗೆ ಪ್ರವೇಶ ಪಡೆದ ದಲಿತ ವಿದ್ಯಾರ್ಥಿಗಳಿಗೆ ದೆಹಲಿ ಸರ್ಕಾರ ಧನಸಹಾಯ ನೀಡಲಿದೆ. ದೆಹಲಿಯ ಯಾವುದೇ ದಲಿತ ವಿದ್ಯಾರ್ಥಿಯು ಹಣದ ಕೊರತೆಯಿಂದಾಗಿ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ತಮ್ಮ ಅಧ್ಯಯನವನ್ನು ತ್ಯಜಿಸಬಾರದು ಎಂದು ಕೇಜ್ರಿವಾಲ್ ತಮ್ಮ ಪ್ರಚಾರದಲ್ಲಿ ತಿಳಿಸಿದರು.
ಅಂಬೇಡ್ಕರ್ ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಅ್ಯಂಡ್ ಪೊಲಿಟಿಕಲ್ ಸೈನ್ಸ್‌ನಲ್ಲಿ ಓದುವಾಗ ಹಣದ ಕೊರತೆಯಿಂದ ತಮ್ಮ ಶಿಕ್ಷಣವನ್ನು ಮಧ್ಯದಲ್ಲಿ ನಿಲ್ಲಿಸಬೇಕಾಯಿತು. ಅವರು ಮನೆಗೆ ಹಿಂದಿರುಗಿ ಹಣದ ವ್ಯವಸ್ಥೆ ಮಾಡಿಕೊಂಡು ಹಿಂತಿರುಗಿ ಅವರ ಶಿಕ್ಷಣವನ್ನು ಪೂರ್ಣಗೊಳಿಸಿದರು ಎಂದರು.