Thursday, December 8, 2022

Latest Posts

ಗುಜರಾತ್‌ ಸಿಎಂ ಅಭ್ಯರ್ಥಿ ಘೋಷಿಸಿದ ಕೇಜ್ರಿವಾಲ್:‌ ಮುಖ್ಯಮಂತ್ರಿ ಸ್ಥಾನಕ್ಕೆ ಮಾಜಿ ಟಿವಿ ನಿರೂಪಕ ಸ್ಪರ್ಧೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಮಂತ್ರಿ ಅಬ್ಯರ್ಥಿಯಾಗಿ ಇಸುದನ್ ಗಧ್ವಿ ಅವರನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.

ಇಸುದನ್ ಗಧ್ವಿ ಎಎಪಿಯ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಗುಜರಾತ್‌ನಲ್ಲಿ ರಾಜಕೀಯವಾಗಿ ಪ್ರಭಾವಿಯಾಗಿರುವ ಒಬಿಸಿ ವರ್ಗಕ್ಕೆ ಸೇರಿದವರಾಗಿದ್ದಾರೆ.

ಇಸುದನ್‌ ಗಾಧ್ವಿ, ಒಬ್ಬ ಮಾಜಿ ಟಿವಿ ನಿರೂಪಕ ಹಾಗೂ ಪತ್ರಕರ್ತರಾಗಿದ್ದಾರೆ. ಆಪ್‌ ನಡೆಸಿದ ಸಮೀಕ್ಷೆಯಲ್ಲಿ 40 ವರ್ಷದ ಗಾಧ್ವಿ ಶೇ.73ರಷ್ಟು ಮತಗಳನ್ನು ಪಡೆದಿದ್ದಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಪಾಟಿದಾರ್ ಸಮುದಾಯದ ಆಂದೋಲನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಗೋಪಾಲ್ ಇಟಾಲಿಯಾ ವಿರುದ್ಧ ಗಾಧ್ವಿ ಕಣಕ್ಕಿಳಿದಿದ್ದರು.

ವರದಿಗಳ ಪ್ರಕಾರ ರೈತ ಕುಟುಂಬದಿಂದಲೇ ಬಂದಿರುವ ಗಾಧ್ವಿ ರಾಜ್ಯದ ಜನಸಂಖ್ಯೆಯ ಶೇಕಡಾ 48 ರಷ್ಟಿರುವ ಇತರ ಹಿಂದುಳಿದ ಜಾತಿಗಳಿಗೆ ಸೇರಿದವರಾಗಿದ್ದಾರೆ. 2021 ರಲ್ಲಿ ಆಪ್‌ ಗೆ ಸೇರಿದ್ದರು. ಗಾಧ್ವಿ ಆರಂಭದಲ್ಲಿ ದೂರದರ್ಶನದಲ್ಲಿ ಕೆಲಸ ಮಾಡಿದ್ದರು. ನಂತರ ಪತ್ರಕರ್ತರಾಗಿ ತಮ್ಮ ವೃತ್ತಿಜೀವನದಲ್ಲಿ, ಅವರು ಗುಜರಾತ್‌ನ ಡ್ಯಾಂಗ್ ಜಿಲ್ಲೆಯಲ್ಲಿ ಅರಣ್ಯನಾಶದ 150 ಕೋಟಿ ರೂ. ಹಗರಣವನ್ನು ಬಯಲಿಗೆಳೆದಿದ್ದರು. ಅವರು ಖಾಸಗಿ ವಾಹಿನಿಯೊಂದರಲ್ಲಿ ನಿರೂಪಿಸುತ್ತಿದ್ದ ಕಾರ್ಯಕ್ರಮವೊಂದು ಭಾರೀ ಜನಪ್ರಿಯತೆ ಗಳಿಸಿತ್ತು. ಹಾಗಾಗಿ ಜನರ ಪಾಲಿಗೆ ಅವರ ಮುಖ ಹೊಸದೇನಲ್ಲ ಎನ್ನಲಾಗಿದೆ.

ಪ್ರಸ್ತುತ ಗುಜರಾತ್ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದ್ದು ಡಿಸೆಂಬರ್ 1 ರಂದು ಹಾಗೂ ಡಿಸೆಂಬರ್ 5 ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. 182 ಸದಸ್ಯ ಬಲ ಹೊಂದಿರುವ ಗುಜರಾತ್‌ ವಿಧಾನ ಸಭೆಯ ಚುನಾವಣಾ ಮತ ಎಣಿಕೆಯು ಡಿ. 8 ರಂದು ನಡೆಯಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!