ದೀದಿ ಬೆನ್ನಲ್ಲೇ ನೀತಿ ಆಯೋಗದ ಸಭೆ ಬಹಿಷ್ಕರಿಸಿದ ಕೇಜ್ರಿವಾಲ್: ಪ್ರಧಾನಿಗೆ ಬಂತು ಪತ್ರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನೂತನ ಸಂಸತ್‌ ಭವನದ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸದ ಕಾರಣ ಸುಮಾರು 20 ಪ್ರತಿಪಕ್ಷಗಳು ಸಂಸತ್‌ ಭವನದ ಉದ್ಘಾಟನೆ ಕಾರ್ಯಕ್ರಮವನ್ನು ಬಹಿಷ್ಕರಿಸಿವೆ.

ಇದರ ಬೆನ್ನಲ್ಲೇ, ನೀತಿ (NITI Aayog Meeting) ಆಯೋಗದ ಸಭೆಗೂ ಬಹಿಷ್ಕಾರದ ಬಿಸಿಯು ತಟ್ಟಿದೆ. ಈಗಾಗಲೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನೀತಿ ಆಯೋಗದ ಸಭೆಗೆ ಹಾಜರಾಗದಿರಲು ತೀರ್ಮಾನಿಸಿದ್ದು, ಈಗ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರು ಕೂಡ ಸಭೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

ದೆಹಲಿ ಆಡಳಿತ ಸೇವೆಗಳ ಮೇಲೆ ನಿಯಂತ್ರಣ ಸಾಧಿಸಲು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿರುವ ಹಿನ್ನೆಲೆಯಲ್ಲಿ ಅರವಿಂದ್‌ ಕೇಜ್ರಿವಾಲ್‌ ಅವರು ಸಭೆಗೆ ಗೈರಾಗಲು ತೀರ್ಮಾನಿಸಿರುವ ಜತೆಗೆ ನರೇಂದ್ರ ಮೋದಿ ಅವರಿಗೆ ಪತ್ರವನ್ನೂ ಬರೆದಿದ್ದಾರೆ.

‘ಪ್ರಧಾನಿ ಅವರೇ ಸುಪ್ರೀಂ ಕೋರ್ಟ್‌ ತೀರ್ಪಿಗೆ ಬದ್ಧರಾಗದಿದ್ದರೆ, ನ್ಯಾಯಕ್ಕಾಗಿ ಯಾರ ಬಳಿ ತೆರಳಬೇಕು ಎಂದು ಜನ ಕೇಳುತ್ತಿದ್ದಾರೆ. ಸಹಕಾರ ಒಕ್ಕೂಟ ಎಂಬುದೇ ಹಾಸ್ಯಾಸ್ಪದವಾಗಿರುವಾಗ ನೀತಿ ಆಯೋಗದ ಸಭೆಗೆ ಹಾಜರಾಗುವುದರಿಂದ ಏನು ಪ್ರಯೋಜನ’ ಎಂದು ಪ್ರಶ್ನಿಸಿದ್ದಾರೆ.

ಮೋದಿಗೆ ಕೇಜ್ರಿವಾಲ್‌ ಪತ್ರ

ಪಶ್ಚಿಮ ಬಂಗಾಳದ ಬೇಡಿಕೆಗಳನ್ನು ಈಡೇರಿಸದ ಕಾರಣದಿಂದಾಗಿ ಮಮತಾ ಬ್ಯಾನರ್ಜಿ ಅವರು ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳದಿರಲು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ. ದೇಶದ ಅಭಿವೃದ್ಧಿ ಹಾಗೂ ಆರ್ಥಿಕ ವಿಚಾರಗಳ ದೃಷ್ಟಿಯಿಂದಾಗಿ ನೀತಿ ಆಯೋಗದ ಸಭೆಯು ಪ್ರಾಮುಖ್ಯತೆ ಪಡೆದಿದೆ. ಆದರೆ, ಮುಖ್ಯಮಂತ್ರಿಗಳು ಈಗ ನೀತಿ ಆಯೋಗದ ಸಭೆಯನ್ನೇ ಬಹಿಷ್ಕರಿಸಿದ್ದಾರೆ. ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಕೂಡ ಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ.

ಲೋಕಸಭೆ ಚುನಾವಣೆ ದೃಷ್ಟಿಯಿಂದಾಗಿ ಪ್ರತಿಪಕ್ಷಗಳು ಒಗ್ಗಟ್ಟು ಪ್ರದರ್ಶಿಸುತ್ತೇವೆ. ಇದಕ್ಕಾಗಿಯೇ ಕೆಲ ದಿನಗಳ ಹಿಂದೆ ಅರವಿಂದ್‌ ಕೇಜ್ರಿವಾಲ್‌, ಭಗವಂತ್‌ ಮಾನ್‌ ಅವರು ಸಭೆ ನಡೆಸಿದ್ದರು. ಕೇಂದ್ರ ಸರ್ಕಾರದ ಸುಗ್ರೀವಾಜ್ಞೆ ವಿಚಾರದಲ್ಲೂ ಪ್ರತಿಪಕ್ಷಗಳು ಒಗ್ಗಟ್ಟಾಗುತ್ತಿವೆ. ಎನ್‌ಸಿಪಿ ವರಿಷ್ಠ ಶರದ್‌ ಪವಾರ್‌ ಅವರು ದೆಹಲಿ ಸರ್ಕಾರದ ಪರ ನಿಂತಿದ್ದಾರೆ. ಸಂಸತ್‌ ಭವನದ ವಿಚಾರದಲ್ಲಂತೂ ಬಹುತೇಕ ಪ್ರತಿಪಕ್ಷಗಳು ಒಗ್ಗೂಡಿವೆ. ಈಗ ನೀತಿ ಆಯೋಗದ ಸಭೆ ವಿಚಾರದಲ್ಲೂ ಒಗ್ಗಟ್ಟು ಪ್ರದರ್ಶಿಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!