ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಂಗಳವಾರ ಸಂಜೆ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರನ್ನು ಭೇಟಿಯಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಇಂದು ಸಂಜೆ 4.30ಕ್ಕೆ, ನಿಯೋಜಿತ ಮುಖ್ಯಮಂತ್ರಿ ಅತಿಶಿ ಸೇರಿದಂತೆ ಅವರ ಕ್ಯಾಬಿನೆಟ್ ಸಹೋದ್ಯೋಗಿಗಳೊಂದಿಗೆ ರಾಜಭವನಕ್ಕೆ ಆಗಮಿಸಿ ರಾಜೀನಾಮೆ ಸಲ್ಲಿಸಿದರು.
ನಂತರ ಅತಿಶಿ ಅವರು ಸಕ್ಸೇನಾ ಅವರನ್ನು ಭೇಟಿಯಾಗಿ, ದೆಹಲಿಯಲ್ಲಿ ಹೊಸ ಸರ್ಕಾರ ರಚಿಸಲು ಹಕ್ಕು ಮಂಡಿಸಿದರು ಎಂದು ಎಎಪಿ ನಾಯಕ ಗೋಪಾಲ್ ರೈ ಹೇಳಿದ್ದಾರೆ.
ಅತಿಶಿ ಅವರು ದೆಹಲಿ ಸಿಎಂ ಆಗುತ್ತಿರುವ ಮೂರನೇ ಮಹಿಳೆ ಮತ್ತು ಸಿಎಂ ಸ್ಥಾನ ಅಲಂಕರಿಸುತ್ತಿರುವ ಅತ್ಯಂತ ಕಿರಿಯ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಅಲ್ಲದೆ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ನಂತರ ಅತಿಶಿ(43) ಅವರು ದೇಶದ ಎರಡನೇ ಪ್ರಸ್ತುತ ಮಹಿಳಾ ಮುಖ್ಯಮಂತ್ರಿಯಾಗಲಿದ್ದಾರೆ.