ವಯನಾಡ್‌ನಲ್ಲಿ ರಾಹುಲ್‌ ಗಾಂಧಿ ಸ್ಪರ್ಧೆಗೆ ಕೇರಳ ಸಿಎಂ ಅಸಮಾಧಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್‌: 

ಲೋಕಸಭೆ ಚುನಾವಣೆಯಲ್ಲಿಎನ್‌ಡಿಎ ವಿರುದ್ಧ ಅಖಾಡಕ್ಕೆ ಇಳಿದ ಇಂಡಿಯಾ ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವುದಕ್ಕೆ ಮತ್ತೊಂದು ಪುರಾವೆ ಸಿಕ್ಕಿದೆ.

ಕಾಂಗ್ರೆಸ್‌ನ ನಾಯಕ ರಾಹುಲ್‌ ಗಾಂಧಿ ವಯನಾಡ್‌ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿರುವುದಕ್ಕೆ ಇಂಡಿಯಾ ಮೈತ್ರಿಕೂಟದ ಸದಸ್ಯ ಪಕ್ಷ ಹಾಗೂ ಕೇರಳ ಮುಖ್ಯಮಂತ್ರಿ ಪಿಣರಾಜಿ ವಿಜಯನ್‌ ಟೀಕೆ ಮಾಡಿದ್ದಾರೆ.

ವಯನಾಡ್‌ನಲ್ಲಿ ಎಲ್‌ಡಿಎಫ್‌ ಹಾಗೂ ಕಮ್ಯುನಿಸ್ಟ್ ಪಾರ್ಟಿ ಆಫ್‌ ಇಂಡಿಯಾದ (ಸಿಪಿಐ) ರಾಷ್ಟ್ರೀಯ ನಾಯಕಿ ಆನ್ನಿ ರಾಜಾರನ್ನು ಕಣಕ್ಕೆ ಇಳಿಸಿದೆ. ಇದರ ಬೆನ್ನಲ್ಲಿಯೇ ವಯನಾಡ್‌ನಲ್ಲಿ ಇಂಡಿಯಾ ಮೈತ್ರಿಯ ಭಾಗವಾಗಿರುವ ಕಾಂಗ್ರೆಸ್ ವಿರುದ್ಧ ಮೈತ್ರಿಯ ಸಿಪಿಐ ಟೀಕಾಪ್ರಹಾರ ಮಾಡಲು ಆರಂಭಿಸಿದೆ. ಕೇರಳ ಸಿಎಂ ಪಿಣರಾಯಿ ವಿಜಯನ್‌, ರಾಹುಲ್‌ ಗಾಂಧಿ ಬಿಜೆಪಿ ವಿರುದ್ಧ ಸೂಕ್ತವಾಗಿ ಪ್ರಚಾರ ಕಾರ್ಯ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಕೋಳಿಕ್ಕೋಡ್‌ನಲ್ಲಿ ಚುನಾವಣಾ ಪ್ರಚಾರವನ್ನು ಉದ್ದೇಶಿಸಿ ಮಾತನಾಡಿದ ವಿಜಯನ್‌, ‘ರಾಷ್ಟ್ರಮಟ್ಟದಲ್ಲಿ ಹೆಸರಾಂತ ಎಡ ನಾಯಕಿ ಅನ್ನಿ ರಾಜಾ ವಿರುದ್ಧ ರಾಹುಲ್ ಗಾಂಧಿ ಸ್ಪರ್ಧಿಸುತ್ತಿದ್ದಾರೆ. ಮಣಿಪುರದ ವಿಷಯದಲ್ಲಿ ಬಿಜೆಪಿ ಸರ್ಕಾರವನ್ನು ಬಲವಾಗಿ ಇವರು ಟೀಕೆ ಮಾಡಿದ್ದರು. ಅನ್ನಿ ರಾಜಾ ಅವರನ್ನು ದೇಶವಿರೋಧಿ ಎಂದು ಕರೆಯುವ ಮೂಲಕ ದಾಳಿ ಮಾಡಲಾಯಿತು. ಮಣಿಪುರ ವಿಚಾರದಲ್ಲಿ ರಾಹುಲ್ ಗಾಂಧಿ ಮಾಡಿದ್ದಾದರೂ ಏನು? ದೇಶದಲ್ಲಿ ನಡೆಯುತ್ತಿರುವ ಪ್ರತಿ ಪ್ರತಿಭಟನೆಯಲ್ಲಿ ಅನ್ನಿ ರಾಜಾ ಅವರ ಉಪಸ್ಥಿತಿಯನ್ನು ನಾವು ಕಾಣಬಹುದು. ಆದರೆ ಅಂತಹ ಪ್ರತಿಭಟನಾಕಾರರಲ್ಲಿ ಕಾಂಗ್ರೆಸ್‌ನ ಪ್ರಮುಖ ನಾಯಕ ರಾಹುಲ್ ಗಾಂಧಿಯನ್ನು ನಾವು ನೋಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಕುತೂಹಲದ ಅಂಶವೇನೆಂದರೆ, ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ದೆಹಲಿಯಲ್ಲಿ ಇಂಡಿಯಾ ಮೈತ್ರಿಕೂಟದ ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಿ ಕಾಂಗ್ರೆಸ್‌ ನಾಯಕರೊಂದಿಗೆ ವೇದಿಕೆ ಹಂಚಿಕೊಂಡ ಒಂದು ದಿನದ ಬಳಿಕ ಈ ಹೇಳಿಕೆ ಬಂದಿದೆ.

ರಾಹುಲ್ ಗಾಂಧಿ ಎಲ್ಲಿಂದ ಬೇಕಾದರೂ ಸ್ಪರ್ಧಿಸಬಹುದು, ಅದನ್ನು ಅವರು ನಿರ್ಧರಿಸಬಹುದು. ಆದರೆ ಇದರ ಅನುಚಿತತೆಯ ಬಗ್ಗೆ ಇಡೀ ದೇಶವೇ ಚರ್ಚಿಸಬೇಕು. ಅವರು ನೇರವಾಗಿ ಬಿಜೆಪಿ ವಿರುದ್ಧ ಏಕೆ ಸ್ಪರ್ಧಿಸುತ್ತಿಲ್ಲ? ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಮತ್ತು ಅನ್ನಿ ರಾಜಾ ಇಬ್ಬರೂ ವಯನಾಡ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿಯು ಕೇರಳ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಅವರನ್ನು ಈ ಕ್ಷೇತ್ರದಿಂದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!