ಕೇರಳ ದಂಪತಿ, ಸ್ನೇಹಿತೆ ಅರುಣಾಚಲದ ಹೊಟೇಲ್‌ನಲ್ಲಿ ನಿಗೂಢ ಸಾವು: ಬ್ಲ್ಯಾಕ್ ಮ್ಯಾಜಿಕ್ ಶಂಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದ ದಂಪತಿ ಹಾಗೂ ಅವರ ಸ್ನೇಹಿತೆ ಎನ್ನಲಾದ ಯುವತಿ ಅರುಣಾಚಲ ಪ್ರದೇಶದ ಹೋಟೆಲ್ ಕೊಠಡಿಯೊಂದರಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದು, ಈ ಘಟನೆ ಭಾರೀ ಆತಂಕ, ಕುತೂಹಲಕ್ಕೆ ಕಾರಣವಾಗಿದೆ.

ಮೃತಪಟ್ಟವರನ್ನು ಪೊಲೀಸ್ ಮೂಲಗಳ ಪ್ರಕಾರ ಕೇರಳದ ಕೊಟ್ಟಾಯಂ ಜಿಲ್ಲೆಯ ಆಯುರ್ವೇದ ವೈದ್ಯ ನವೀನ್ ಥಾಮಸ್ (35), ಅವರ ಪತ್ನಿ ದೇವಿ (35) ಹಾಗೂ ತಿರುವನಂತಪುರಂ ನಿವಾಸಿ, ಶಾಲಾ ಶಿಕ್ಷಕಿ ಆರ್ಯ ಬಿ. ನಾಯರ್ (29) ಎಂದು ಗುರುತಿಸಲಾಗಿದೆ. ಈ ಮೂವರೂ ಅರುಣಾಚಲ ಪ್ರದೇಶದಲ್ಲಿನ ಇಟಾ ನಗರದ ಹೋಟೆಲ್ ಒಂದರಲ್ಲಿ ಕಳೆದ ತಿಂಗಳ ಮಾ.೨೮ರಿಂದ ಒಂದೇ ಕೊಠಡಿಯಲ್ಲಿ ವಾಸ್ತವ್ಯ ಹೂಡಿದ್ದರು.

ಕಳೆದ ಕೆಲವು ದಿನಗಳಿಂದ ಕೊಠಡಿ ಬಾಗಿಲು ತೆರೆಯದ ಕಾರಣ ಅನುಮಾನಗೊಂಡು ಹೋಟೆಲ್ ಸಿಬ್ಬಂದಿ ಬಾಗಿಲು ತೆರೆದಿದ್ದಾರೆ. ಈ ವೇಳೆ ಆರ್ಯ ಶವ ಬೆಡ್ ಮೇಲೆ ಪತ್ತೆಯಾಗಿದ್ದರೆ, ಅಲ್ಲೇ ನೆಲದ ಮೇಲೆ ಮತ್ತೊಂದು ಕಡೆ ದೇವಿ ಶವ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ನವೀನ್ ಥಾಮಸ್ ಸ್ನಾನದ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಮೂವರ ಕೈಗಳಲ್ಲಿ ಕೂಡಾ ನರ ತುಂಡರಿಸಿಕೊಂಡ ಗುರುತಿದ್ದು, ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿರುವುದು ಕಂಡುಬಂದಿದೆ.

ಈ ನಡುವೆ ಕೊಠಡಿಯಲ್ಲಿ ಡೆತ್ ನೋಟ್ ಸಿಕ್ಕಿದ್ದು, ನಮಗೆ ಯಾವುದೇ ಸಾಲವಿಲ್ಲ, ಯಾವುದೇ ತೊಂದರೆಗಳು ಸಹ ಇಲ್ಲ. ನಾವು ಯಾವ ಸ್ಥಳಕ್ಕೆ ಹೋಗಬೇಕೋ ಅಲ್ಲಿಗೆ ಹೋಗುತ್ತಿದ್ದೇವೆ ಎಂದು ಮೂವರು ಸಹಿ ಮಾಡಿದ್ದಾರೆ. ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಎಂದು ಪರಿಗಣಿಸಲಾಗಿದ್ದು, ಈ ಘಟನೆಯ ಹಿಂದೆ ವಾಮಾಚಾರ ಕೆಲಸಮಾಡಿದೆ ಎಂಬ ಗಂಭೀರ ಆರೋಪವೂ ಕೇಳಿಬಂದಿರುವ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ.

ಶವಗಳ ಮರಣೋತ್ತರ ಪರೀಕ್ಷೆಯ ಬಳಿಕ ಕೇರಳ ಪೊಲೀಸರಿಗೆ ಹಸ್ತಾಂತರಿಸಲಾಗುವುದು ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!