ಕೇರಳ ಅರಣ್ಯ ಕಾಯ್ದೆಗೆ ತಿದ್ದುಪಡಿ ತರಲು ತಯಾರಿ, ವ್ಯಾಪಕ ವಿರೋಧ ಯಾಕೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕೇರಳ ಸರ್ಕಾರವು ಕೇರಳ ಅರಣ್ಯ ಕಾಯ್ದೆ-1981ಕ್ಕೆ ತಿದ್ದುಪಡಿ ತರಲು ಮಸೂದೆಯೊಂದನ್ನು ಸಿದ್ಧಪಡಿಸಿದೆ. ಈ ತಿಂಗಳ ಕೊನೆಯಲ್ಲಿ ನಡೆಯಲಿರುವ ರಾಜ್ಯ ವಿಧಾನಸಭೆಯ ಅಧಿವೇಶನದಲ್ಲಿ ಮಸೂದೆ ಮಂಡಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಆದರೆ ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಪ್ರಸ್ತುತ ಕೇರಳ ಅರಣ್ಯ (ತಿದ್ದುಪಡಿ) ಮಸೂದೆ 2024, ಅರಣ್ಯ ಸರಂಕ್ಷಣೆಗೆ ಹಲವು ರೀತಿಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸುತ್ತದೆ. ಅರಣ್ಯ ಪ್ರದೇಶವನ್ನು ತ್ಯಾಜ್ಯ ವಿಲೇವಾರಿ ಮಾಡುವ ಸ್ಥಳವಾಗಿ ಬಳಸುತ್ತಿರುವುದನ್ನು ತಡೆಯುವುದು, ಅರಣ್ಯದೊಳಗಿನ ನದಿ ಅಥವಾ ಅರಣ್ಯ ಪ್ರದೇಶಗಳಲ್ಲಿ ಹರಿಯುವ ಜಲಮೂಲಗಳಲ್ಲಿ ತ್ಯಾಜ್ಯ ಎಸೆಯುವುದರ ವಿರುದ್ಧ ಕ್ರಮ ಕೈಗೊಳ್ಳುವ ನಿರ್ಣಯವನ್ನು ಸೂಚಿಸುತ್ತದೆ.

ಕಾಡಿನ ಸಂರಕ್ಷಣೆಗಾಗಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ಒದಗಿಸುವ ಜೊತೆಗೆ ವಿವಿಧ ಅಪರಾಧಗಳಿಗೆ ವಿಧಿಸುವ ದಂಡ ಹಾಗೂ ಶಿಕ್ಷೆಯ ಪ್ರಮಾಣವನ್ನೂ ದುಪ್ಪಟ್ಟು ಮಾಡುವುದು ಮಸೂದೆ ಉದ್ದೇಶವಾಗಿದೆ. ಆದರೆ ಇದನ್ನು ವಿರೋಧಿಸುತ್ತಿರುವುದು ಯಾಕೆ?

ಸದ್ಯ ಕರಡಿನಲ್ಲಿ ಪರಿಶೀಲಿಸಲಾದ ಅಂಶಗಳ ಪ್ರಕಾರ ಹೊಸ ಮಸೂದೆಯು ಅರಣ್ಯಾಧಿಕಾರಿಗಳು ಅಪರಾಧಕ್ಕೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿ ಮೇಲೆ ಸಂಶಯ ಬಂದರೂ ವಾರಂಟ್‌ ಇಲ್ಲದೇ ಆತನನ್ನ ಬಂಧಿಸುವ ಅಧಿಕಾರ ನೀಡುತ್ತದೆ. ಇದರಿಂದ ಅಮಾಯಕರು ಅರೆಸ್ಟ್‌ ಆಗಿಬಿಟ್ಟರೆ ಅನ್ನೋದು ವಿರೋಧಕ್ಕೆ ಕಾರಣವಾದ ಮೊದಲ ಅಂಶವಾಗಿದೆ.

ಹೊಸ ತಿದ್ದುಪಡಿಯು ಬೀಟ್ ಫಾರೆಸ್ಟ್ ಆಫೀಸರ್, ಬುಡಕಟ್ಟು ವೀಕ್ಷಕ ಮತ್ತು ಅರಣ್ಯ ವೀಕ್ಷಕರನ್ನು ʻಅರಣ್ಯ ಅಧಿಕಾರಿ’ ಎಂಬ ವ್ಯಾಖ್ಯಾನಕ್ಕೆ ತಂದಿದೆ. ಈ ಮೂಲಕ ಅವರು ಅರಣ್ಯಾಧಿಕಾರಿಯ ಯಾವುದೇ ಕರ್ತವ್ಯವನ್ನು ನಿರ್ವಹಿಸಬಹುದು ಎನ್ನಲಾಗಿದೆ. ಸದ್ಯ ಕೆಲವರು ರಾಜಕೀಯ ಪಕ್ಷಗಳ ಶಿಫಾರಸುಗಳ ಆಧಾರದ ಮೇಲೆ ನೇಮಕಗೊಂಡಿದ್ದಾರೆ. ಇನ್ನೂ ಕೆಲವರು ತಾತ್ಕಾಲಿಕ ಅವಧಿ ನಿರ್ವಹಿಸುತ್ತಿದ್ದಾರೆ. ಎಲ್ಲರಿಗೂ ಅರಣ್ಯ ಅಧಿಕಾರಿಯ ಅಧಿಕಾರ ನೀಡುವುದರಿಂದ ಅವರು ಅದನ್ನು ದುರ್ಬಳಕೆ ಮಾಡಿಕೊಳ್ಳಬಹುದು. ಬೀಟ್‌ ಫಾರೆಸ್ಟ್‌ ಅಧಿಕಾರಿ ಸಹ ಯಾವುದೇ ವಾಹನವನ್ನು ನಿಲ್ಲಿಸಬಹುದು, ಶೋಧಿಸಬಹುದು ಅಥವಾ ವಿಚಾರಣೆ ನಡೆಸಬಹುದು. ಅಲ್ಲದೇ ಆ ಅಧಿಕಾರಿಯ ವ್ಯಾಪ್ತಿಯಲ್ಲಿರುವ ಕಟ್ಟಡ, ಆವರಣ, ಜಮೀನು ಹಡಗುಗಳನ್ನು ಪ್ರವೇಶಿಸಿ ಶೋಧಿಸಬಹುದು. ಯಾವುದೇ ಸಂಶಯಾಸ್ಪದ ವ್ಯಕ್ತಿಯನ್ನು ತನ್ನ ನಿಯಂತ್ರಣದಲ್ಲಿಡುವುದಕ್ಕೆ ಅನುವುಮಾಡಿಕೊಡುತ್ತದೆ ಎಂದು ತಜ್ಞರು ಹೇಳಿದ್ದಾರೆ. ಎನ್ನುವುದು ಇನ್ನೊಂದು ಅಂಶವಾಗಿದೆ.

ಸದ್ಯ ಅರಣ್ಯ ಸಂರಕ್ಷಣೆ ಕಾಯ್ದೆ ಅಡಿಯಲ್ಲಿ ಸಣ್ಣ ಅರಣ್ಯ ಅಪರಾಧಗಳಿಗೆ 1,000 ರೂ. ದಂಡ ವಿಧಿಸಲಾಗುತ್ತಿದೆ. ಈ ಪ್ರಮಾಣ 25,000 ರೂ.ಗಳಿಗೆ ಹೆಚ್ಚಾಗುತ್ತದೆ. 25,000 ರೂ. ವರೆಗಿನ ಇತರ ದಂಡದ ಪ್ರಮಾಣ 50,000 ರೂ.ಗಳಿಗೆ ಹೆಚ್ಚಾಗುತ್ತದೆ ಎನ್ನುವುದು ಮೂರನೇ ಅಂಶವಾಗಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!