ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿ ನಡೆದ ಸರಣಿ ಸ್ಫೋಟಗಳ ಬಗ್ಗೆ ಸಚಿವ ರಾಜೀವ ಚಂದ್ರಶೇಖರ ಮಾಡಿರುವ ಟ್ವೀಟ್‌ನಲ್ಲಿ ಧಾರ್ಮಿಕ ದ್ವೇಷ ಪ್ರಚಾರ ಮಾಡುವ ಅಂಶಗಳಿವೆ ಎಂದು ಆರೋಪಿಸಿ ಕೇರಳ ಪೊಲೀಸರು ಐಪಿಸಿಯ ಸೆಕ್ಷನ್ 153 (ಎ) ಮತ್ತು ಕೇರಳ ಪೊಲೀಸ್ ಕಾಯ್ದೆಯ ಸೆಕ್ಷನ್ 120 ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಕೇರಳದಲ್ಲಿ ಆಡಳಿತಾರೂಢ ಕಮ್ಯುನಿಸ್ಟರು ಮತ್ತು ಕಾಂಗ್ರೆಸ್ಸಿಗರ ತುಷ್ಟೀಕರಣ ನೀತಿಯೇ ಸ್ಫೋಟ ಘಟನೆಗಳಿಗೆ ಕುಮ್ಮಕ್ಕು ಕೊಟ್ಟಿದೆ ಎಂದು ದೂರಿದ್ದ ರಾಜೀವ ಚಂದ್ರಶೇಖರ್, ಸ್ಫೋಟಕ್ಕೂ ಒಂದು ದಿನದ ಮುಂಚೆ ಹಮಾಸ್ ನಾಯಕನೊಬ್ಬ ವಿಡಿಯೊ ಮೂಲಕ ಸಾವಿರಾರು ಜನರನ್ನು ಉದ್ದೇಶಿಸಿ ಮಾತನಾಡುವುದಕ್ಕೆ ಕೇರಳ ಸರ್ಕಾರ ಅನುವು ಮಾಡಿಕೊಟ್ಟಿತೇಕೆ ಎಂದು ಪ್ರಶ್ನಿಸಿದ್ದರು.
ಇದನ್ನು ಕೋಮು ದ್ವೇಷ ಹರಡುವ ವರ್ತನೆ ಎಂದು ಪರಿಗಣಿಸಿ ಎಫ್ಐಆರ್ ಹಾಕಿರುವ ಕೇರಳ ಪೊಲೀಸರ ಕ್ರಮವನ್ನು ಟೀಕಿಸಿರುವ ಕೇಂದ್ರ ಸಚಿವರು, “ನಾನು ಹಮಾಸ್ ಅನ್ನು ಟೀಕಿಸಿದರೆ ಅದು ಮುಸ್ಲಿಂ ಸಮುದಾಯದ ವಿರುದ್ಧ ಮಾತನಾಡಿದಂತಾಗುತ್ತದೆಯೇ? ಮುಸ್ಲಿಂ ಸಮುದಾಯದವರೆಲ್ಲ ಹಮಾಸಿಗರು ಎದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿರ್ಧರಿಸಿರುವಂತಿದೆ” ಎಂದು ಮರು ಪ್ರತಿಕ್ರಿಯೆ ನೀಡಿದ್ದಾರೆ.
ಕೇರಳದ ಎರ್ನಾಕುಲಂ ಜಿಲ್ಲೆಯ ಕಲಮಸ್ಸೆರಿಯಲ್ಲಿ ಕ್ರೈಸ್ತರ ನಿರ್ದಿಷ್ಟ ಪಂಗಡವೊಂದು ಪ್ರಾರ್ಥನಾ ಸಮಾರಂಭದಲ್ಲಿ ನಿರತವಾಗಿದ್ದಾಗ ಸ್ಫೋಟ ಸಂಭವಿಸಿತ್ತು. ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, 51 ಮಂದಿ ಗಾಯಗೊಂಡಿದ್ದಾರೆ.