ಇ- ಟ್ಯಾಕ್ಸಿಸೇವೆಯತ್ತ ಕೇರಳ: ಸರ್ಕಾರದಿಂದ ಮೊದಲ ಬಾರಿಗೆ ಕ್ಯಾಬ್‌ ಸೇವೆ ಪ್ರಾರಂಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೇರಳದಲ್ಲಿ ಮುಂದಿನ ತಿಂಗಳಿನಿಂದ ತನ್ನದೇ ಆದ ಇ- ಟ್ಯಾಕ್ಸಿ ಸೇವೆಯನ್ನು ಪ್ರಾರಂಭವಾಗಲಿದೆ. ಇದು ದೇಶದಲ್ಲಿ ಕೇರಳ ರಾಜ್ಯ ಸರ್ಕಾರದಿಂದ ಮೊದಲ ಉಪಕ್ರಮವೆಂದು ಪರಿಗಣಿಸಲಾಗಿದೆ.
‘ಕೇರಳ ಸವಾರಿ’ ಎಂಬ ಹೆಸರಿನ ಆನ್‌ಲೈನ್ ಟ್ಯಾಕ್ಸಿ ಬಾಡಿಗೆ ಸೇವೆಯನ್ನು ರಾಜ್ಯ ಕಾರ್ಮಿಕ ಇಲಾಖೆಯು ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಆಟೋ- ಟ್ಯಾಕ್ಸಿ ನೆಟ್‌ವರ್ಕ್‌ಗಳನ್ನು ಸಂಪರ್ಕಿಸುವ ಮೂಲಕ ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಸುರಕ್ಷಿತ ಮತ್ತು ವಿವಾದ ಮುಕ್ತ ಪ್ರಯಾಣವನ್ನು ಖಾತರಿಪಡಿಸುವ ಉದ್ದೇಶದಿಂದ ಈ ಸೇವೆಯನ್ನು ಹೊರತರುತ್ತಿದೆ.

ಕೇರಳದ ಸಾರ್ವಜನಿಕ ಶಿಕ್ಷಣ ಮತ್ತು ಕಾರ್ಮಿಕ ಸಚಿವ ವಿ ಶಿವನ್‌ಕುಟ್ಟಿ ಮಾತನಾಡಿ,ದೇಶದಲ್ಲಿ ಸರ್ಕಾರವೊಂದು ಆನ್‌ಲೈನ್ ಟ್ಯಾಕ್ಸಿ ಸೇವೆಯನ್ನು ಪ್ರಾರಂಭಿಸುತ್ತಿರುವುದು ಇದೇ ಮೊದಲು. ಈ ಸರ್ಕಾರವು ಕಾರ್ಮಿಕರ ಕಲ್ಯಾಣ ಉದ್ದೇಶದಿಂದ ಬಹುರಾಷ್ಟ್ರೀಯ ಕಂಪನಿಗಳ ಮಾದರಿಯಲ್ಲಿ ಪ್ರಬಲ ಸ್ಪರ್ಧೆ ನೀಡಲು ಮುಂದಾಗುತ್ತಿದೆ ಎಂದು ತಿಳಿಸಿದರು.

ಕೇರಳ ಸವಾರಿ ನಿಗದಿತ ದರದ ಹೊರತಾಗಿ ಶೇ 8ರಷ್ಟು ಸೇವಾ ಶುಲ್ಕವನ್ನು ಮಾತ್ರ ವಿಧಿಸಲಿದೆ. ಕೇರಳ ಸವಾರಿ ಆಯಪ್ ಮಕ್ಕಳು ಮತ್ತು ಮಹಿಳೆಯರಿಗೆ ಬಳಸಲು ಅತ್ಯಂತ ಸುರಕ್ಷಿತವಾದ ವ್ಯವಸ್ಥೆಯಾಗಿದೆ. ಭದ್ರತಾ ಮಾನದಂಡಗಳ ಮೂಲಕ ಅತ್ಯಂತ ಕಾಳಜಿಯಿಂದ ಆಯಪ್ ಅನ್ನು ವಿನ್ಯಾಸಗೊಳಿಸಲಾಗಿದೆ. ಆಯಪ್‌ನಲ್ಲಿ ಪ್ಯಾನಿಕ್ ಬಟನ್ ವ್ಯವಸ್ಥೆ ಇದ್ದು, ಇದು ಕಾರು ಅಪಘಾತದ ಸಂದರ್ಭದಲ್ಲಿ ಅಥವಾ ಬೇರೆ ಯಾವುದೇ ರೀತಿಯ ಅಪಾಯದ ಸಂದರ್ಭದಲ್ಲಿ ಒತ್ತಬಹುದು ಸಚಿವ ವಿ ಶಿವನ್‌ಕುಟ್ಟಿ ತಿಳಿಸಿದರು.

ಈ ಯೋಜನೆಯನ್ನು ಯೋಜನಾ ಮಂಡಳಿ, ಕಾನೂನು ಮಾಪನಶಾಸ್ತ್ರ, ಸಾರಿಗೆ, ಐಟಿ ಮತ್ತು ಪೊಲೀಸ್ ಇಲಾಖೆಗಳ ಸಹಕಾರದೊಂದಿಗೆ ಮೋಟಾರು ಕಾರ್ಮಿಕರ ಕಲ್ಯಾಣ ಮಂಡಳಿಯು ಅನುಷ್ಠಾನಗೊಳಿಸಲಿದೆ. ಸಾರ್ವಜನಿಕ ವಲಯದ ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್, ಪಾಲಕ್ಕಾಡ್ ಸಂಸ್ಥೆಯು ಯೋಜನೆಗೆ ತಾಂತ್ರಿಕ ನೆರವು ನೀಡಿದೆ ಎಂದು ಅವರು ಹೇಳಿದರು.
ಆಗಸ್ಟ್ 17 ರಂದು ಮಲಯಾಳಂ ತಿಂಗಳ ಚಿಂಗಮ್‌ನ ಆರಂಭದ ದಿನದಂದು ಇಲ್ಲಿನ ಕನಕಕ್ಕುನ್ನು ಅರಮನೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಹೊಸ ಸೇವೆಯನ್ನು ಪ್ರಾರಂಭಿಸಲಾಗುವುದು. ಕೇರಳ ಸವಾರಿಯಿಂದ ಸಂಪೂರ್ಣ ಸುರಕ್ಷಿತ ಮತ್ತು ವಿವಾದ ಮುಕ್ತ ಪ್ರಯಾಣ ಎಂಬ ಭರವಸೆ ನೀಡಲಾಗಿದೆ ಶಿವನ್‌ಕುಟ್ಟಿ ಹೇಳಿದರು.

ಇತ್ತೀಚಿನ ದಿನಗಳಲ್ಲಿ ಜನರು ಆನ್‌ಲೈನ್ ಟ್ಯಾಕ್ಸಿ ಸೇವೆಗಳನ್ನು ಬಳಸಲು ಬಯಸುತ್ತಿರುವುದರಿಂದ,ಸಾಂಪ್ರದಾಯಿಕ ಟ್ಯಾಕ್ಸಿ ಸ್ಟ್ಯಾಂಡ್‌ಗಳು ಕಣ್ಮರೆಯಾಗಿವೆ. ಹೆಚ್ಚಿನ ಸಂಖ್ಯೆಯ ಮೋಟಾರು ಸಾರಿಗೆ ನೌಕರರು ನಿರುದ್ಯೋಗಿಗಳಾಗಿದ್ದಾರೆ. ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯು ಮೋಟಾರು ಸಾರಿಗೆ ಕಾರ್ಮಿಕರ ವಲಯವನ್ನು ಕಾಲದ ಅಗತ್ಯಕ್ಕೆ ಅನುಗುಣವಾಗಿ ಬದಲಾಯಿಸುವ ಅಗತ್ಯವಿದೆ ಎಂಬುದನ್ನು ಮನಗಂಡು ಸರ್ಕಾರಿ ವಲಯದಲ್ಲಿ ಆನ್‌ಲೈನ್ ಟ್ಯಾಕ್ಸಿ ಸೇವೆಯನ್ನು ಪ್ರಾರಂಭಿಸಲು ನಿರ್ಧರಿಸಿದೆ ಎಂದು ಸಚಿವರು ಹೇಳಿದರು.

ಸೇವಾ ಶುಲ್ಕವಾಗಿ ಸಂಗ್ರಹಿಸಿದ ಮೊತ್ತವನ್ನು ಯೋಜನೆಯ ಅನುಷ್ಠಾನ ಮತ್ತು ಪ್ರಯಾಣಿಕರಿಗೆ ಉತ್ತೇಜನಕ್ಕಾಗಿ ಬಳಸಿಕೊಳ್ಳಲಾಗುತ್ತದೆ. ಪ್ರಸ್ತುತ ತಿರುವನಂತಪುರಂ ಕಾರ್ಪೊರೇಷನ್‌ನ ಮಿತಿಯಲ್ಲಿ ಸುಮಾರು 500 ಆಟೋ-ಟ್ಯಾಕ್ಸಿ ಚಾಲಕರು ಯೋಜನೆಯ ಸದಸ್ಯರಾಗಿದ್ದಾರೆ. ವಿವಿಧ ಇಲಾಖೆಗಳ ಅಧಿಕಾರಿಗಳು ಅವರಿಗೆ ವಿವಿಧ ವಿಷಯಗಳಲ್ಲಿ ತರಬೇತಿ ನೀಡಿದ್ದಾರೆ ಎಂದು ಸಚಿವರು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!