July 28, 2026
Tuesday, July 28, 2026
spot_img

ಬಾರುಯಿಪುರ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಪೊಲೀಸ್ ಎನ್‌ಕೌಂಟರ್‌ಗೆ ಬಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಬಾರುಯಿಪುರದಲ್ಲಿ ಇಡೀ ಸಮಾಜವೇ ತಲೆತಗ್ಗಿಸುವಂತಹ ಘಟನೆ ನಡೆದಿತ್ತು. 11 ವರ್ಷದ ಶಾಲಾ ಬಾಲಕಿಯ ಮೇಲೆ ಮೃಗೀಯವಾಗಿ ಅತ್ಯಾಚಾರ ನಡೆಸಿ, ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಪ್ರಕರಣದ ಪ್ರಮುಖ ಆರೋಪಿ ಪ್ರವಾಶ್‌ ಮೊಂಡಲ್‌ನನ್ನು ಪೊಲೀಸರು ಎನ್‌ಕೌಂಟರ್‌ ಮಾಡಿದ್ದಾರೆ. ತನಿಖೆಯ ಭಾಗವಾಗಿ ತಡರಾತ್ರಿ ಸಾಕ್ಷ್ಯ ಸಂಗ್ರಹಿಸಲು ಆತನನ್ನು ಘಟನಾ ಸ್ಥಳಕ್ಕೆ ಕರೆದೊಯ್ದಾಗ, ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಆರೋಪಿ ಹತನಾಗಿದ್ದಾನೆ.

ರಾಜ್ಯಾದ್ಯಂತ ಭುಗಿಲೆದ್ದಿದ್ದ ಸಾರ್ವಜನಿಕ ಆಕ್ರೋಶ

ಕೆಲ ದಿನಗಳ ಹಿಂದೆ ಬಾರುಯಿಪುರದ ಕೊಳವೊಂದರಲ್ಲಿ ಚೀಲದಲ್ಲಿ ತುಂಬಿಟ್ಟಿದ್ದ ಸ್ಥಿತಿಯಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು. ಈ ಭೀಕರ ಕೃತ್ಯದ ವಿರುದ್ಧ ಪಶ್ಚಿಮ ಬಂಗಾಳದಾದ್ಯಂತ ವಿದ್ಯಾರ್ಥಿ ಸಂಘಟನೆಗಳು ಹಾಗೂ ಸಾರ್ವಜನಿಕರು ಬೀದಿಗಿಳಿದು ತೀವ್ರ ಪ್ರತಿಭಟನೆ ನಡೆಸಿದ್ದರು. ಮಹಿಳಾ ಸುರಕ್ಷತೆಯ ಕುರಿತು ಸರ್ಕಾರದ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಚುರುಕುಗೊಳಿಸಿ ನಾಲ್ವರನ್ನು ಬಂಧಿಸಿದ್ದರು.

ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವು

ಸ್ಥಳ ಮಹಜರು ವೇಳೆ ಗಾಯಗೊಂಡ ಆರೋಪಿ ಮೊಂಡಲ್‌ನನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆತ ಮೃತಪಟ್ಟಿರುವುದಾಗಿ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಘಟನೆಯಲ್ಲಿ ಕೆಲವು ಪೊಲೀಸ್ ಸಿಬ್ಬಂದಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಬಂಧಿತರಾಗಿರುವ ಆನಂದ ಸರ್ದಾರ್ ಮತ್ತು ದಿಬಾಕರ್ ಸರ್ದಾರ್ ಸೇರಿದಂತೆ ಇತರೆ ಆರೋಪಿಗಳು ಈಗಾಗಲೇ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಾರ್ವಜನಿಕರು ಆರೋಪಿಗೆ ಕಠಿಣ ಶಿಕ್ಷೆ ಒದಬೇಕೆಂದು ಒತ್ತಾಯಿಸುತ್ತಿದ್ದ ಬೆನ್ನಲ್ಲೇ ಈ ಎನ್‌ಕೌಂಟರ್ ನಡೆದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !