ಹೊಸದಿಗಂತ ಡಿಜಿಟಲ್ ಡೆಸ್ಕ್:
ರಸ್ತೆಗಳಲ್ಲಿ ಸಭೆ, ರ್ಯಾಲಿಗಳನ್ನು ನಿಷೇಧಿಸಿ ಜಗನ್ ಸರ್ಕಾರ ಆದೇಶ ಹೊರಡಿಸಿದೆ. ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ರಾಷ್ಟ್ರೀಯ, ರಾಜ್ಯ, ಪುರಸಭೆ ಮತ್ತು ಪಂಚಾಯತ್ ರಸ್ತೆಗಳಲ್ಲಿ ಸಭೆಗಳು ಮತ್ತು ರ್ಯಾಲಿಗಳನ್ನು ನಿಷೇಧಿಸಲಾಗಿದೆ. ಜನರಿಗೆ ಸಮಸ್ಯೆ ಇಲ್ಲದ ಕಡೆ ಸಭೆ ನಡೆಸಬೇಕು, ನಿಯಮ ಉಲ್ಲಂಘಿಸಿದರೆ ಸಂಘಟಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ.
ಯಾವುದೇ ಸಭೆಗಳನ್ನು ಮುಖ್ಯ ರಸ್ತೆಗಳಿಂದ ದೂರವಿಟ್ಟು ಸಾರ್ವಜನಿಕ ತೊಂದರೆ ಇಲ್ಲದ ಪ್ರದೇಶಗಳಲ್ಲಿ ಆಯೋಜಿಸಬೇಕು ಎಂದು ಸರ್ಕಾರ ಸೂಚಿಸಿದೆ. ಸಭೆ ನಡೆಸಲು ಪರ್ಯಾಯ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಮತ್ತು ಆಯ್ದ ಸ್ಥಳಗಳಲ್ಲಿ ಸಭೆಗಳಿಗೆ ಷರತ್ತುಬದ್ಧ ಅನುಮತಿ ನೀಡಬೇಕು ಎಂದು ಸರ್ಕಾರ ಅಧಿಕಾರಿಗಳಿಗೆ ಸ್ಪಷ್ಟಪಡಿಸಿದೆ. ಎಪಿ ಗೃಹ ಇಲಾಖೆ ಮಂಗಳವಾರ ಈ ಕುರಿತು ಆದೇಶ ಹೊರಡಿಸಿದೆ.
ಇತ್ತೀಚೆಗೆ ಚಂದ್ರಬಾಬು ಆಯೋಜಿಸಿದ್ದ ಸಭೆಗಳಲ್ಲಿ ಕಾಲ್ತುಳಿತ ಉಂಟಾಗಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಸರಣಿ ಘಟನೆಗಳ ಹಿನ್ನೆಲೆಯಲ್ಲಿ ಎಪಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.