August 30, 2026
Sunday, August 30, 2026
spot_img

ರೌಡಿಶೀಟರ್‌ಗಳ ಮನೆ ಬಾಗಿಲು ತಟ್ಟಿದ ಖಾಕಿ ಪಡೆ: 5 ಜಿಲ್ಲೆಗಳಲ್ಲಿ ಭರ್ಜರಿ ಕಾರ್ಯಾಚರಣೆ

ಹೊಸದಿಗಂತ ವರದಿ ಬೆಳಗಾವಿ :

ಉತ್ತರ ವಲಯದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ ಹಾಗೂ ಗದಗ ಜಿಲ್ಲೆಗಳಲ್ಲಿ ರೌಡಿಶೀಟರ್‌ಗಳ ಚಟುವಟಿಕೆಗಳ ಮೇಲೆ ನಿಗಾ ವಹಿಸುವ ಉದ್ದೇಶದಿಂದ ಪೊಲೀಸರು ಭಾನುವಾರ ಬೆಳಗಿನ ಜಾವ ಏಕಕಾಲದಲ್ಲಿ ದಿಢೀರ್ ಕಾರ್ಯಾಚರಣೆ ನಡೆಸಿದ್ದಾರೆ.

ಏಕ ಕಾಲಕ್ಕೆ ಐದು ಜಿಲ್ಲೆಗಳಲ್ಲಿ ಒಟ್ಟು 1,041 ರೌಡಿಶೀಟರ್‌ಗಳ ಮನೆಗಳನ್ನು ಪರಿಶೀಲನೆ ನಡೆಸಲಾಗಿದೆ. ಇದರಲ್ಲಿ ಬೆಳಗಾವಿ ಜಿಲ್ಲೆಯ 201, ವಿಜಯಪುರ 482, ಬಾಗಲಕೋಟೆ 117, ಧಾರವಾಡ 46 ಹಾಗೂ ಗದಗ ಜಿಲ್ಲೆಯ 195 ಮನೆಗಳು ಸೇರಿವೆ.

ಇದನ್ನೂ ಓದಿ:

ಪರಿಶೀಲನೆಯ ಸಂದರ್ಭದಲ್ಲಿ ಅನುಮಾನಾಸ್ಪದ ಚಟುವಟಿಕೆಗಳ ಹಿನ್ನೆಲೆಯಲ್ಲಿ 27 ಸ್ಥಳಗಳಲ್ಲಿ ದಾಳಿ ನಡೆಸಲಾಗಿದ್ದು, ರೌಡಿಶೀಟರ್‌ಗಳಿಗೆ ಸಂಬಂಧಿಸಿದ 9 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಇದಲ್ಲದೆ, ಎನ್‌ಡಿಪಿಎಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲಾಗಿದೆ.

ದಾಳಿಯ ವೇಳೆ ವಶಪಡಿಸಿಕೊಂಡ ವಸ್ತುಗಳು ಹಾಗೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಆಯಾ ಪೊಲೀಸ್ ಠಾಣೆಗಳಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ರೌಡಿಶೀಟರ್‌ಗಳ ಚಟುವಟಿಕೆಗಳ ಮೇಲೆ ನಿರಂತರ ನಿಗಾ ವಹಿಸುವುದರ ಜೊತೆಗೆ, ಅನಿರೀಕ್ಷಿತ ದಾಳಿ ಹಾಗೂ ಪರಿಶೀಲನೆಗಳನ್ನು ಮುಂದುವರಿಸಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಸಮಾಜದಲ್ಲಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಹಾಗೂ ಸಾರ್ವಜನಿಕರ ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ಉತ್ತರ ವಲಯ ಪೊಲೀಸರ ಈ ಕಾರ್ಯಾಚರಣೆ ಮಹತ್ವ ಪಡೆದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !