Saturday, December 27, 2025

ದೆಹಲಿಯಲ್ಲಿ ಖಾಕಿ ಆರ್ಭಟ: ನ್ಯೂ ಇಯರ್ ಪಾರ್ಟಿ ಕೆಡಿಸಲು ಸಂಚು ರೂಪಿಸಿದ್ದ ಕ್ರಿಮಿನಲ್‌ಗಳು ಅರೆಸ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೊಸ ವರ್ಷದ ಸಂಭ್ರಮಾಚರಣೆಯ ಹೊಸ್ತಿಲಲ್ಲಿರುವ ರಾಷ್ಟ್ರ ರಾಜಧಾನಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ದೆಹಲಿ ಪೊಲೀಸರು ಬೃಹತ್ ಕಾರ್ಯಾಚರಣೆ ನಡೆಸಿದ್ದಾರೆ. ‘ಆಪರೇಷನ್ ಆಘಾಟ್ 3.0’ ಅಡಿಯಲ್ಲಿ ಆಗ್ನೇಯ ದೆಹಲಿಯಾದ್ಯಂತ ಹಠಾತ್ ದಾಳಿ ನಡೆಸಿದ ಪೊಲೀಸರು, ಒಟ್ಟು 504 ವ್ಯಕ್ತಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೊಸ ವರ್ಷದ ಸಮಯದಲ್ಲಿ ಗಲಭೆ ಅಥವಾ ಅಪರಾಧ ಎಸಗುವ ಸಂಚು ರೂಪಿಸಿದ್ದ 285 ಮಂದಿಯನ್ನು ಒಂದೇ ರಾತ್ರಿಯಲ್ಲಿ ಬಂಧಿಸಲಾಗಿದೆ. ಈವರೆಗೆ ಒಟ್ಟು ಬಂಧಿತರ ಸಂಖ್ಯೆ 504ಕ್ಕೆ ಏರಿಕೆಯಾಗಿದೆ.

ಆರೋಪಿಗಳಿಂದ 21 ಅಕ್ರಮ ಪಿಸ್ತೂಲುಗಳು, 20 ಗನ್‌ಪೌಡರ್ ಹಾಗೂ 27 ಚಾಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಸುಮಾರು 7 ಕೆಜಿ ಗಾಂಜಾವನ್ನು ಜಪ್ತಿ ಮಾಡಲಾಗಿದೆ.

ಪಾರ್ಟಿಗಳಿಗಾಗಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ 12,000ಕ್ಕೂ ಹೆಚ್ಚು ಮದ್ಯದ ಬಾಟಲಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಾರ್ಯಾಚರಣೆ ವೇಳೆ 210 ಮೊಬೈಲ್ ಫೋನ್‌ಗಳು, 231 ದ್ವಿಚಕ್ರ ವಾಹನಗಳು ಹಾಗೂ 4 ನಾಲ್ಕು ಚಕ್ರದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ 2.5 ಲಕ್ಷ ರೂ. ನಗದು ಪತ್ತೆಯಾಗಿದೆ.

ಬಂಧಿತರ ಮೇಲೆ ಶಸ್ತ್ರಾಸ್ತ್ರ ಕಾಯ್ದೆ, ಅಬಕಾರಿ ಕಾಯ್ದೆ, ಎನ್‌ಡಿಪಿಎಸ್ (ಮಾದಕ ವಸ್ತು ವಿರೋಧಿ ಕಾಯ್ದೆ) ಮತ್ತು ಜೂಜಾಟ ತಡೆ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಲಾಗಿದೆ. ವಾಹನ ಸವಾರರಿಗೆ ತೊಂದರೆ ನೀಡುತ್ತಿದ್ದ ಐವರು ಪ್ರಮುಖ ‘ಆಟೋ ಲಿಫ್ಟರ್’ಗಳನ್ನು (ವಾಹನ ಕಳ್ಳರು) ಸಹ ಈ ಕಾರ್ಯಾಚರಣೆಯಲ್ಲಿ ಸೆರೆಹಿಡಿಯಲಾಗಿದೆ.

ಒಟ್ಟಾರೆಯಾಗಿ, ದೆಹಲಿ ಜನತೆ ನಿರ್ಭಯವಾಗಿ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಪೊಲೀಸರು ಈ ‘ಕ್ಲೀನ್ ಅಪ್’ ಡ್ರೈವ್ ಮೂಲಕ ಕ್ರಿಮಿನಲ್‌ಗಳಿಗೆ ಬಿಸಿ ಮುಟ್ಟಿಸಿದ್ದಾರೆ.

error: Content is protected !!