July 4, 2026
Saturday, July 4, 2026
spot_img

ಹತ್ಯೆಯಾದ ನಾಲ್ಕು ತಿಂಗಳ ಬಳಿಕ ಇಂದು ಖಮೇನಿ ಅಂತ್ಯಕ್ರಿಯೆ: ಶವಪೆಟ್ಟಿಗೆ ಅನಾವರಣ, ಶೋಕದ ವಾತಾವರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಮೆರಿಕ ಹಾಗೂ ಇಸ್ರೇಲ್‌ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ಹತರಾದ ಇರಾನ್‌ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆ ಬರೋಬ್ಬರಿ ನಾಲ್ಕು ತಿಂಗಳ ನಂತರ ನಡೆಯುತ್ತಿದ್ದು, ಇದೀಗ ಶವಪೆಟ್ಟಿಗೆಯನ್ನು ಅನಾವರಣಗೊಳಿಸಲಾಗಿದೆ.

ಇಸ್ಲಾಮಿಕ್‌ ಗಣರಾಜ್ಯದ ಸಾವಿರಾರು ಬೆಂಬಲಿಗರು ಗ್ರ್ಯಾಂಡ್‌ ಮೊಸಲ್ಲಾ ಧಾರ್ಮಿಕ ಸಂಕೀರ್ಣದ ಹೊರಗೆ ನಿಂತು ತಮ್ಮ ನೆಚ್ಚಿನ ನಾಯಕನಿಗಾಗಿ ಕಣ್ಣೀರಿಡುತ್ತಿದ್ದಾರೆ. ಇಸ್ಲಾಮಿಕ್ ಗಣರಾಜ್ಯವನ್ನು ಪ್ರಮುಖ ವ್ಯಕ್ತಿಯಾಗಿ ಆಳಿದ ಅಲಿ ಖಮೇನಿ ಅವರನ್ನು ಸ್ಮರಿಸಲು ಆರು ದಿನಗಳ ಅಂತ್ಯಕ್ರಿಯೆ ಸಮಾರಂಭಗಳನ್ನು ಯೋಜಿಸಲಾಗಿದೆ. 86 ವರ್ಷದ ನಾಯಕನ ಶವಪೆಟ್ಟಿಗೆಯನ್ನು ಟೆಹ್ರಾನ್ ನಲ್ಲಿ ಇದೀಗ ಪ್ರದರ್ಶಿಸಲಾಗಿದ್ದು, ಇಡೀ ದೇಶವೇ ದುಃಖತಪ್ತವಾಗಿದೆ. ಅಲ್ಲದೆ ದೇಶದ ಸರ್ವೋಚ್ಚ ನಾಯಕನನ್ನು ಕೊಂದ ವಿನಾಶಕಾರಿ ಯುದ್ಧದ ನಂತರ ಇಸ್ಲಾಮಿಕ್ ಗಣರಾಜ್ಯವನ್ನು ಬೆಂಬಲಿಸುವಂತೆ ಸಾರ್ವಜನಿಕರಿಗೆ ಒತ್ತಾಯಿಸುವ ಬ್ಯಾನರ್‌ಗಳು ಟೆಹ್ರಾನ್‌ನಾದ್ಯಂತ ರಾರಾಜಿಸುತ್ತಿವೆ.

ಕಳೆದ ಮೂರು ದಶಕಗಳಿಂದ ಇರಾನ್ ಅನ್ನು ಆಳಿದ ಖಮೇನಿ, ಫೆಬ್ರವರಿ 28 ರಂದು ಟೆಹ್ರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯ ಮೊದಲ ದಿನ ಹತ್ಯೆಯಾಗಿದ್ದರು. ಕಳೆದ ಮಾರ್ಚ್ ತಿಂಗಳಲ್ಲಿ ನಡೆಯಬೇಕಿದ್ದ ಖಮೇನಿ ಅಂತ್ಯಕ್ರಿಯೆಯನ್ನು ಸಂಘರ್ಷದಿಂದಾಗಿ ಮುಂದೂಡಲಾಗಿತ್ತು. ಇಂದಿನಿಂದ ಅಂತ್ಯಕ್ರಿಯೆಯ ವಿಧಿವಿಧಾನಗಳು ಆರಂಭವಾಗಲಿದ್ದು, ಇಂದು ಅವರ ಸದಸ್ಯರ ಜೊತೆಗೆ ಧ್ವಜದಿಂದ ಹೊದಿಸಲಾದ ಖಮೇನಿಯ ಶವಪೆಟ್ಟಿಗೆಯನ್ನು ಟೆಹ್ರಾನ್‌ನ ಗ್ರ್ಯಾಂಡ್ ಮೊಸಲ್ಲಾದಲ್ಲಿ ಪ್ರದರ್ಶಿಸಲಾಗಿದೆ. ಹತ್ಯೆಯಾದವರಲ್ಲಿ ಖಮೇನಿ ಅವರ ಅಳಿಯ, ಅವರ ಹಿರಿಯ ಮಗಳು, 14 ತಿಂಗಳ ಮೊಮ್ಮಗಳು ಮತ್ತು ಅವರ ಮಗ ಅಯತೊಲ್ಲಾ ಮೊಜ್ತಬಾ ಖಮೇನಿಯ ಪತ್ನಿ ಸೇರಿದ್ದಾರೆ.

ಅಂತ್ಯಕ್ರಿಯೆಯಲ್ಲಿ 90 ದೇಶಗಳ ನಿಯೋಗಗಳು ಭಾಗಿ

ಇಂದಿನಿಂದ ಆರು ದಿನಗಳ ನಡೆಯುವ ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿ ಭಾರತ, ರಷ್ಯಾ ಸೇರಿ ಸುಮಾರು 90 ದೇಶಗಳ ನಿಯೋಗಗಳು ಭಾಗವಹಿಸುವುದಾಗಿ ಖಚಿತಪಡಿಸಿವೆ. ಭಾರತದಿಂದ ಬಿಹಾರದ ರಾಜ್ಯಪಾಲ ಸೈಯದ್ ಅತಾ ಹಸ್ನೈನ್, ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಪವಿತ್ರ ಮಾರ್ಗರಿಟಾ, ಮಾಜಿ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್, ಸಂಸದ ಪವನ್ ಖೇರಾ, ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ, ಹಾಗೂ ಜಮ್ಮು-ಕಾಶ್ಮೀರದ ಮುಸ್ಲಿಂ ನಾಯಕ ಆಘಾ ಸೈಯದ್ ಹಸನ್ ಮೊಸವಿ ಅಲ್ ಸಫವಿ ಭಾಗವಹಿಸಲಿದ್ದಾರೆ.

ಇಷ್ಟು ತಿಂಗಳು ಖಮೇನಿ ಮೃತದೇಹ ಎಲ್ಲಿತ್ತು?

ಇಷ್ಲಾಮಿಕ್‌ ಷರಿಯಾ ಕಾನೂನಿನ ಪ್ರಕಾರ ಯಾವುದೇ ವ್ಯಕ್ತಿ ಮೃತಪಟ್ಟ ಒಂದು ದಿನದ ಒಳಗಾಗಿ ಅಂತ್ಯಕ್ರಿಯೆ ಮುಗಿಯಬೇಕು. ಮೃತದೇಹಕ್ಕೆ ಯಾವುದೇ ಕೆಮಿಕಲ್‌ ಹಾಕಿ ರಕ್ಷಣೆ ಮಾಡುವುದನ್ನು ಇಸ್ಲಾಂ ಧರ್ಮ ನಿಷೇಧಿಸುತ್ತದೆ. ಆದರೆ ಖಮೇನಿ ಪಾರ್ಥಿವ ಶರೀರವನ್ನು ಸಂರಕ್ಷಿಸಲು ವಿನಾಯಿತಿ ನೀಡಲಾಗಿದೆ. ವರದಿಗಳ ಪ್ರಕಾರ ಖಮೇನಿ ಅವರ ಮೃತದೇಹವನ್ನು ವಿಶೇಷ ಹಿಮಗೃಹದಲ್ಲಿ ಅಂದರೆ ರೆಫ್ರಿಜರೇಟೆಡ್‌ ಕೋಲ್ಡ್‌ ಸ್ಟೋರೇಜ್‌ನಲ್ಲಿ ಇಡಲಾಗಿತ್ತು. ರಾಸಾಯನಿಕಗಳನ್ನು ಬಳಸದೇ ಬರೀ ತಾಪಮಾನ ನಿಯಂತ್ರಣದ ಮೂಲಕ ದೇಹವನ್ನು ಸಂರಕ್ಷಿಸಲಾಗಿದೆ.

ಶಿಯಾ ಮುಸ್ಲಿಂ ಧರ್ಮಶಾಸ್ತ್ರದಲ್ಲಿ ಯುದ್ಧ ಅಥವಾ ದೇಶದ ತುರ್ತು ಪರಿಸ್ಥಿತಿಯಂತಹ ಅಸಾಧಾರಣ ಸಂದರ್ಭಗಳಲ್ಲಿ ಅಂತ್ಯಸಂಸ್ಕಾರವನ್ನು ಮುಂದೂಡಲು ಮತ್ತು ಶೀತಲೀಕರಣದ ಮೂಲಕ ದೇಹವನ್ನು ಕಾಯ್ದಿರಿಸಲು ಅವಕಾಶವಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !