ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲ ದಿನಗಳ ಹಿಂದೆ ಅಮೆರಿಕದಲ್ಲಿ ಚಾಕು ಇರಿತಕ್ಕೊಳಗಾಗಿದ್ದ ಖಮ್ಮಂ ವಿದ್ಯಾರ್ಥಿ ವರುಣ್ ರಾಜ್ (29) ಚಿಕಿತ್ಸೆ ಫಲಿಸದೆ ಇಂದು ಸಾವನ್ನಪ್ಪಿದ್ದಾರೆ. ಜಿಮ್‌ನಿಂದ ಬರುತ್ತಿದ್ದ ವೇಳೆ ದುಷ್ಕರ್ಮಿಯೊಬ್ಬನಿಂದ ಚಾಕು ಇರಿತಕ್ಕೊಳಗಾಗಿ ಅಂದಿನಿಂದ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದರು. ಬುಧವಾರ ವರುಣ್ ರಾಜ್ ಮೃತಪಟ್ಟಿರುವ ಸುದ್ದಿ ಕುಟುಂಬಸ್ಥರಿಗೆ ಬರ ಸಿಡಿಲಿನಿಂತೆ ಅಪ್ಪಳಿಸಿದ್ದು, ಸೂತಕದ ಛಾಯೆ ಆವರಿಸಿದೆ.
ಖಮ್ಮಂ ಪಟ್ಟಣದ ಮಾಮಿಲಗುಡೆಂ ಪ್ರದೇಶದವರಾದ ವರುಣ್ ರಾಜ್ ಅಮೆರಿಕದ ಇಂಡಿಯಾನಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ಎಂಎಸ್ ವಿದ್ಯಾಭ್ಯಾಸ ಮಾಡುತ್ತಾ ಜೊತೆಗೆ ಅರೆಕಾಲಿಕ ಉದ್ಯೋಗ ಮಾಡುತ್ತಿದ್ದರು. ಅಕ್ಟೋಬರ್ 31ರಂದು ನಡೆದ ಚಾಕು ದಾಳಿಯಿಂದ ತೀವ್ರ ಗಾಯಗೊಂಡ ವರುಣ್‌ನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದರು. ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಬುಧವಾರ ಬೆಳಗ್ಗೆ ಮೃತಪಟ್ಟಿದ್ದಾರೆ.
ವರುಣ್ ತಂದೆ, ರಾಮ್ ಮೂರ್ತಿ ಮಹಬೂಬಾಬಾದ್ ಜಿಲ್ಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ವರುಣನ ತಲೆಗೆ ಚಾಕುವಿನಿಂದ ದಾಳಿ ಮಾಡಿದ ಜೋರ್ಡಾನ್ ಆಂಡ್ರೇಡ್ ನನ್ನು ಬಂಧಿಸಲಾಗಿದೆ ಎಂದು ಟೈಮ್ಸ್ ಆಫ್ ನಾರ್ತ್ ವೆಸ್ಟ್ ಇಂಡಿಯಾ ವರದಿ ಮಾಡಿದೆ.