ಹೊಸದಿಗಂತ ವರದಿ ಕಾರವಾರ :
ಉ.ಕ ಜಿಲ್ಲೆಯಲ್ಲಿ ಮೂರು ಎಕರೆಗಿಂತ ಕಡಿಮೆ ಅರಣ್ಯ ಭೂಮಿ ಅತಿಕ್ರಮಣ ಮಾಡಿ ಸಾಗುವಳಿ ಮಾಡುತ್ತಿರುವ ಬಡವರಿಗೆ ಯಾವುದೇ ತೊಂದರೆ ನೀಡದಂತೆ ಅರಣ್ಯ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ಅವರು ಬುಧವಾರ ಕಾರವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಉ.ಕ ಜಿಲ್ಲೆ ಅರಣ್ಯದಿಂದ ಆವೃತ್ತವಾದ ಸುಂದರ ಜಿಲ್ಲೆ. ಇಲ್ಲಿಯ ಅಮೂಲ್ಯ ಅರಣ್ಯ ಸಂಪತ್ತು ಸಂರಕ್ಷಣೆಗೆ ಇಲಾಖೆ ಬದ್ಧವಾಗಿದೆ. ಈ ದಿಸೆಯಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದರು.
ಜಿಲ್ಲೆಯಲ್ಲಿ ಅರಣ್ಯ ಅತಿಕ್ರಮಣ ಸಮಸ್ಯೆ ಜ್ವಲಂತವಾಗಿರುವುದು ನನ್ನ ಗಮನಕ್ಕೆ ಇದೆ. ಬಡ ಅತಿಕ್ರಮಣ ದಾರರಿಗೆ ತೊಂದರೆ ಕೊಡುವ ಪ್ರಶ್ನೆಯೇ ಇಲ್ಲ. 3 ಎಕರೆಗಿಂತ ಕಡಿಮೆ ಅತಿಕ್ರಮಣ ಮಾಡಿ ಕೃಷಿ ಸಾಗುವಳಿ ಮಾಡುವವರಿಗೆ, ಬದುಕು ಕಟ್ಟಿಕೊಂಡವರು ಆತಂಕ ಪಡುವ ಅಗತ್ಯ ಇಲ್ಲ. ಇಂಥವರ ಮೇಲೆ ಯಾವುದೇ ಕ್ರಮ ಕೈಗೊಳ್ಳದಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇನ್ನು 3 ಎಕರೆಗಿಂತ ಹೆಚ್ಚು ಅತಿಕ್ರಮಣ ಮಾಡಿಕೊಂಡವರ, ಅರಣ್ಯ ಭೂಮಿಯಲ್ಲಿ ರೆಸಾರ್ಟ್ , ಹೊಟೇಲ್ ಕಟ್ಟಿಕೊಂಡವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಆಗಲಿದೆ ಎಂದರು.