ಬೆಂಗಳೂರಿನಲ್ಲಿ ಆರಂಭವಾಯ್ತು ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2021

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2021 ಅನ್ನು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಭಾನುವಾರ ಉದ್ಘಾಟಿಸಿದರು‌.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಗೆಲ್ಲಲೇಬೇಕೆಂಬ ಛಲದೊಂದಿಗೆ ಆಟ ಆಡಿ. ಸೋಲಲೇಬಾರದು ಎಂದು ಆಡಿ. ಸೋಲಿನ ಭಯ ಇಲ್ಲದಿದ್ದರೆ ಗೆಲುವು ನಿಮ್ಮದಾಗುತ್ತದೆ ಎಂದು ಕ್ರೀಡಾಪಟುಗಳಿಗೆ ಕಿವಿ ಮಾತು ಹೇಳಿದರು‌.

ರಾಷ್ಟಮಟ್ಟದಲ್ಲಿ ಯಾವುದೇ ಕ್ರೀಡಾಕೂಟ ಇದ್ದರೂ ಪ್ರಥಮ ಆದ್ಯತೆಯನ್ನು ಬೆಂಗಳೂರಿಗೆ ನೀಡಬೇಕು. ಈ ಬಾರಿ ಖೇಲೋ ಇಂಡಿಯಾ ಯೂನಿವರ್ಸಿಟಿ ಕ್ರೀಡಾಕೂಟ ಆಯೋಜಿಸಲು ನಮ್ಮ ಮೂಲಭೂತ ಸೌಕರ್ಯಗಳನ್ನು ಹಾಗೂ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದ್ದೇವೆ. ಕ್ರೀಡಾಕೂಟ ಆಯೋಜಿಸಲು ಜೈನ್ ಯೂನಿವರ್ಸಿಟಿ ಬಹಳ ದೊಡ್ಡ ಬೆಂಬಲ ನೀಡಿದೆ. ಕ್ರೀಡಾಕೂಟದ ನಂತರ ಮೌಲ್ಯ ಮಾಪನ ಮಾಡಿ ಕ್ರೀಡಾಕೂಟಗಳನ್ನು ಆಯೋಜಿಸಲು ಬೆಂಗಳೂರಿಗೆ ಆದ್ಯತೆ ನೀಡಬೇಕು ಎಂದರು.

ಖೇಲೋ ಇಂಡಿಯಾ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆಯೋಜಿಸಿರುವುದು ನಮಗೆ ಅತ್ಯಂತ ಹೆಮ್ಮೆಯ ಸಂಗತಿ. ಬೆಂಗಳೂರು ಇಡೀ ಭಾರದ ದೇಶದಲ್ಲಿಯೇ ಅತ್ಯಂತ ಪ್ರಗತಿಪರವಾಗಿರುವ ರಾಜಧಾನಿ. ಅಂತಾರಾಷ್ಟ್ರೀಯ ನಗರ. ಸಿಲಿಕಾನ್ ವ್ಯಾಲಿ ಎಂದು ಕರೆಯಲ್ಪಡುವ ಬೆಂಗಳೂರಿನಲ್ಲಿ ಯೂನಿವರ್ಸಿಟಿ ಕ್ರೀಡಾಕೂಟ ಜರಗುತ್ತಿದೆ. ಸುಮಾರು 3800 ಕ್ರೀಡಾಪಟುಗಳು 20 ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಕ್ರೀಡಾಕೂಟ ಆಯೋಜಿಸುವ ಮೂಲಕ ಕರ್ನಾಟಕದ ಆತಿಥ್ಯ, ಕ್ರೀಡೆಗಳ ಕುರಿತಾದ ಪ್ರೀತಿ ಮತ್ತು ರಾಷ್ಟ್ರದ ಒಗ್ಗಟ್ಟಿಗೆ ಕೊಡುಗೆ ನೀಡುವ ಅವಕಾಶ ಒದಗಿದೆ. ಕ್ರೀಡೆಗಳ ಹಾಗೂ ಸಂಸ್ಕೃತಿಗಳ ಸಮನ್ವಯಕ್ಕೂ ಇದೊಂದು ಅವಕಾಶ ಕಲ್ಪಿಸಿದಂತಾಗಿದೆ ಎಂದು ತಿಳಿಸಿದರು.

ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕ್ರೀಡಾ ಜಗತ್ತಿಗೆ ಹೊಸ ಆಯಾಮ ನೀಡಿದ್ದಾರೆ. ಕ್ರೀಡಾಪಟುಗಳ ಮನಸ್ಥಿತಿಯನ್ನು ಬದಲಾಯಿಸಿದ್ದಾರೆ. ಒಲಂಪಿಕ್ಸ್ ನಲ್ಲಿ ನಾವು ಭಾಗವಹಿಸಿದರೂ ಪದಕ ಗೆಲ್ಲಲಾಗುವುದಿಲ್ಲ ಎಂಬ ಮಾತಿತ್ತು. ಆದರೆ ಪ್ರಧಾನಿಗಳು ‘ಖೇಲೋ ಇಂಡಿಯಾ’, ಫಿಟ್ ಇಂಡಿಯಾ, ಜೀತೋ ಇಂಡಿಯಾ ಘೋಷವಾಕ್ಯಗಳನ್ನು ನೀಡಿದರು. ಅದರ ಫಲಿತಾಂಶವಾಗಿ ಭಾರತ ಅತಿ ಹೆಚ್ಚು ಪದಕಗಳನ್ನು ಟೋಕಿಯೋ ಒಲಂಪಿಕ್ಸ್ ನಲ್ಲಿ ಗೆದ್ದಿತು. ನರೇಂದ್ರ ಮೋದಿಯವರ ಸ್ಫೂರ್ತಿ ಹಾಗೂ ಬೆಂಬಲದಿಂದ ಕ್ರೀಡಾಪಟುಗಳ ಸಾಹಸಗಾಥೆ, ಪರಿಶ್ರಮ ಮತ್ತು ಸಾಧನೆ ಮುಂದುವರಿಯಬೇಕು. ಆದ್ದರಿಂದ ವಿಶ್ವವಿದ್ಯಾಲಯ ಕ್ರೀಡಾಕೂಟಗಳು ಖೇಲೋ ಇಂಡಿಯಾದ ಪ್ರಮುಖ ಭಾಗ ಎಂದರು.

ವಿಶ್ವವಿದ್ಯಾಲಯಗಳು ನಿಮ್ಮೊಳಗಿನ ಅತ್ಯುತ್ತಮವಾದುದನ್ನು ಹೊರಕ್ಕೆ ತೆಗೆದು ಅವಕಾಶಗಳನ್ನು ಒದಗಿಸುವ ಸ್ಥಳ. ಶಿಕ್ಷಣ, ಕ್ರೀಡೆ ಹಾಗೂ ವ್ಯಕ್ತಿತ್ವಗಳನ್ನು ರೂಪಿಸುತ್ತದೆ. ನಿಮ್ಮ ರೆಕ್ಕೆಗಳನ್ನು ತೆರೆದು ಅಸಾಧ್ಯವಾದುದನ್ನು ಸಾಧಿಸಬಹುದು. ಬೆಂಗಳೂರಿನಲ್ಲಿ ಅತ್ಯುತ್ತಮ ಸ್ಥಳಗಳು, ಸಂಸ್ಕೃತಿ, ಹವಾಮಾನವನ್ನು ಆಸ್ವಾದಿಸಲು ಕ್ರೀಡಾ ಜಗತ್ತಿಗೆ ಆಹ್ವಾನ ನೀಡಿದ ಮುಖ್ಯಮಂತ್ರಿಗಳು ಇಲ್ಲಿನ ವ್ಯವಸ್ಥೆ ಮಾತ್ರವಲ್ಲ, ಆತಿಥ್ಯ, ಸ್ನೇಹ, ಮಾರ್ಗದರ್ಶನವನ್ನು ಇತರೆ ರಾಜ್ಯಗಳಿಂದ ಆಗಮಿಸಿರುವವರಿಗೆ ನೀಡುತ್ತೇವೆ. ಈ ಕಾರ್ಯಕ್ರಮವನ್ನು ನೆನಪಿಟ್ಟುಕೊಳ್ಳುವ ರೀತಿಯಲ್ಲಿ ನಮ್ಮ ಆತಿಥ್ಯವಿರುತ್ತದೆ. ಕರ್ನಾಟಕಕ್ಕೆ ಈ ಅವಕಾಶವನ್ನು ನೀಡಿದ್ದಕ್ಕಾಗಿ ಭಾರತ ಸರಕಾರ ಹಾಗೂ ಕ್ರೀಡಾ ಮಂತ್ರಾಲಯಕ್ಕೆ ಮುಖ್ಯಮಂತ್ರಿಗಳು ಧನ್ಯವಾದ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ರಾಜ್ಯ ಕ್ರೀಡಾ ಸಚಿವ ನಾರಾಯಣ ಗೌಡ ಮೊದಲಾದವರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!