ಹೊಸದಿಗಂತ ವರದಿ,ಹಾವೇರಿ:
ಹಾವೇರಿ ತಾಲೂಕಿನ ನಾಗನೂರು ಕ್ರಾಸ್ ಬಳಿ ಸುತ್ತಿಗೆಯಿಂದ ತಲೆಗೆ ಹೊಡೆದು ವ್ಯಕ್ತಿಯ ಹತ್ಯೆ ಮಾಡಿರುವ ಘಟನೆ ಜರುಗಿದೆ.
ಹತ್ಯೆಯಾಗಿರುವ ವ್ಯಕ್ತಿಯನ್ನು ಜಿಲ್ಲೆಯ ಹಾನಗಲ್ ತಾಲೂಕಿನ ಮಾಸನಕಟ್ಟಿ ಗ್ರಾಮದ ಮಹಾದೇವಪ್ಪ ಕುರುವತ್ತಿ (೪೬) ಎಂದು ಗುರುತಿಸಲಾಗಿದೆ. ಕೊಲೆಗಾರರು ವ್ಯಕ್ತಿಯನ್ನು ಕೊಲೆಗೈಯಲು ಬಳಸಿದ ಸುತ್ತಿಗೆಯನ್ನು ಪಕ್ಕದ ಹೊಲದಲ್ಲಿ ಎಸೆದು ಹೋಗಿದ್ದಾರೆ.
ಹಾವೇರಿ ತಾಲೂಕಿನ ನಾಗನೂರು ಕ್ರಾಸ್ ಬಳಿಯ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ೪೮ರ ಪಕ್ಕದಲ್ಲಿರುವ ಸರ್ವೀಸ್ ರಸ್ತೆಯಲ್ಲಿ ಈ ಘಟನೆ ಜರುಗಿದೆ. ಸ್ಥಳಕ್ಕೆ ಪೊಲೀಸರು ಹಾಗೂ ಶ್ವಾನದಳ ಸಿಬ್ಬಂದಿ ಭೇಟಿ, ಪರಿಶೀಲನೆ ನಡೆಸಿದ್ದಾರೆ ಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.