ಹೊಸದಿಗಂತ ವರದಿಬಳ್ಳಾರಿ:
ನಗರದ ಕೌಲ್ ಬಜಾರ್ ಪ್ರದೇಶದಲ್ಲಿ ನಡೆದ ಕೊಲೆಗೆ ಸಂಬಂಧಿಸಿದಂತೆ ಕೆಆರ್ ಪಿಪಿ ಅವರು ರಾಜಕೀಯ ಬಣ್ಣ ಬಳಿಯುತ್ತಿದ್ದು, ಇದು ಶುದ್ಧ ಸುಳ್ಳು, ಕೊಲೆಗೆ ವೈಯಕ್ತಿಕ ಕಾರಣ ಎಂದು ತನಿಖೆಯಲ್ಲಿ ಬಯಲಾಗಿದೆ ಎಂದು ಯುವಜನ ಸಬಲೀಕರಣ, ಕ್ರೀಡೆ ಹಾಗೂ ಪರಿಶಿಷ್ಟ ಪಂಗಡ ಕಲ್ಯಾಣ, ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಹೇಳಿದರು.
ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಮಹೆಬೂಬ್ ಭಾಷಾ ಎನ್ನುವವರು ಕೆಆರ್ ಪಿ ಪಕ್ಷದ ಕಾರ್ಯಕರ್ತ, ರಾಜಕೀಯ ವೈಷಮ್ಯದಿಂದ ನಮ್ಮ ಕಾರ್ಯಕರ್ತನನ್ನು ಕಾಂಗ್ರೆಸ್ ನ ಕಾರ್ಯಕರ್ತರು ಕೊಲೆ ಮಾಡಿದ್ದಾರೆ ಎಂದು ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ಧನ ರೆಡ್ಡಿ ಅವರು ಹೇಳುತ್ತಿದ್ದು, ಇದು ಶುದ್ದ ಸುಳ್ಳು, ಜನಾರ್ಧನ ರೆಡ್ಡಿ ಅವರು ವಿನಾಕಾರಣ ಈ ವಿಚಾರದಲ್ಲಿ ಕಾಂಗ್ರೆಸ್ ನವರನ್ನು ತಳಕು ಹಾಕಲು ಮುಂದಾಗಿದ್ದಾರೆ, ಈ ಕುರಿತು ತನಿಖೆ ಕೈಗೊಂಡಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಎಸ್ಪಿ ಅವರು ಕೊಲೆಗೆ ಕಾರಣವನ್ನು ಸ್ಪಷ್ಟಪಡಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಜಿಲ್ಲೆಯ 5 ಕ್ಷೇತ್ರದಲ್ಲೂ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ್ದು, ಕೆಆರ್ ಪಿ ಪಕ್ಷದವರಿಗೆ ಸಹನೆಯಿಲ್ಲ, ಸೊಲಿನ ಹತಾಷೆಯಿಂದ ಈ ರೀತಿ ನಮ್ಮ ಮೇಲೆ ಹಾಕಲು ಮುಂದಾಗಿದ್ದಾರೆ ಎಂದರು.
ಅವಧಿಯಲ್ಲಿ ಬಳ್ಳಾರಿಯಲ್ಲಿ ಬೃಹತ್, ಮಾದರಿ ರೀತಿಯ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗುವುದು, ಸುಮಾರು ವರ್ಷಗಳಿಂದ ನಾನಾ ಕಾರಣಗಳಿಂದ ನೆನೆಗುದಿಗೆ ಬಿದ್ದಿದೆ, ನಮ್ಮ ಅವಧಿಯಲ್ಲಿ ಏನೇ ಆದರೂ ನಿರ್ಮಿಸುತ್ತೇವೆ, ಇದು ಭರವಸೆಯಲ್ಲ ನುಡಿದಂತೆ ನಡೆದುಕೊಳ್ಳುವೆ ಎಂದರು. ಪಕ್ಷದ ಹಿರೀಯ ಮುಖಂಡ ಬಿ.ಕೆ.ಹರಿಪ್ರಸಾದ್ ಅವರು, ಸಿ.ಎಂ.ಸಿದ್ದರಾಮಯ್ಯ ಅವರ ಕುರಿತು ಮಾತನಾಡಿದ್ದು ಗಮನಕ್ಕಿಲ್ಲ, ದೇವರಾಜು ಅರಸು ಅವರ ಬಳಿಕ ಸಿ.ಎಂ.ಸಿದ್ದರಾಮಯ್ಯ ಹಿಂದುಳಿದ ದೊಡ್ಡ ಮಟ್ಟದ ನಾಯಕರಾಗಿ ಹೊರ ಹೊಮ್ಮಿದ್ದಾರೆ. ಸರ್ಕಾರದಲ್ಲಿ ಎಲ್ಲರಿಗೂ ಸಚಿವ ಸ್ಥಾನ ನಿಡೋಕೆ ಆಗೋಲ್ಲ, ಕೇವಲ 34 ಜನರು ಮಾತ್ರ ಸಚಿವರಾಗಲು ಸಾಧ್ಯ, 135 ನಮ್ಮ ಶಾಸಕರೂ ಸಚಿವರಾಗಲು ಸಾಧ್ಯವಿಲ್ಲ, ಹರಿಪ್ರಸಾದ್ ಅವರು ಹಿರೀಯರು ಅವರೂ ಕೂಡಾ ಸಚಿವರಾಗಲು ಅರ್ಹರಿದ್ದಾರೆ ಎಂದರು.
ಜಿಲ್ಲಾಧಿಕಾರಿ ಪವನ್ ಕುಮಾರ್ ಮಲಪಾಟೆ ಅವರ ವರ್ಗಾವಣೆ ವಿಚಾರದಲ್ಲಿ ನಮ್ಮದೇನು ಪಾತ್ರವಿಲ್ಲ, ಅದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಟ್ಟ ಪರಮಾಧಿಕಾರ, ಶೀಘ್ರದಲ್ಲೇ ಹೊಸ ಡಿಸಿ ಅವರು ನೇಮಕಗೊಳ್ಳಲಿದ್ದಾರೆ ಎಂದರು. 24*7 ಕುಡಿವ ನೀರು ಸರಬರಾಜು ಯೋಜನೆ ಸಂಪೂರ್ಣ ಹಳ್ಳಹಿಡಿದಿದೆ. ಈಗಾಗಲೇ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಇದರಲ್ಲಿ ಅಧಿಕಾರಿಗಳ ತಪ್ಪು, ನಿರ್ಲಕ್ಷ್ಯ ಕಂಡು ಬಂದಲ್ಲಿ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದರು.
ಕುಡುತಿನಿ ಬಳಿಕ ನಡೆಸುತ್ತಿರುವ ರೈತರ ಹೋರಾಟಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಅವರು, ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡೋಲ್ಲ, ಯಾವ ಉದ್ದೇಶಕ್ಕೆ ಜಮೀನುಗಳನ್ನು ವಶಪಡಿಸಿಕೊಳ್ಳಲಾಗಿದೆ, ಅದೇ ಉದ್ದೇಶಕ್ಕೆ ಬಳಕೆಯಾಗಬೇಕು, ಈ ವಿಚಾರದಲ್ಲಿ ರಾಜೀಯೇ ಇಲ್ಲ, ಈಗಾಗಲೇ ಹರ್ಷಲ್ ಮಿತ್ತಲ್, ಎನ್ ಎಂಡಿಸಿ ಸೇರಿದಂತೆ ವಿವಿಧ ಕಂಪನಿಗಳ ಮುಖ್ಯಸ್ಥರಿಗೆ ನೊಟೀಸ್ ನೀಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವಿಜಯಕುಮಾರ್, ಸಚಿವರ ಸಹೋದರ ವೆಂಕಟೇಶ ಪ್ರಸಾದ್, ಇತರರಿದ್ದರು.