ಹೊಸದಿಗಂತ ವರದಿ,ಚಿಕ್ಕಬಳ್ಳಾಪುರ:
ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ನಲ್ಲಿ ಬಂದ ಆನ್ ಲೈನ್ ಲಿಂಕ್ ಅನ್ನು ನಂಬಿದ ಶಿಕ್ಷಕಿಯೊಬ್ಬರು, ಹಣ ದ್ವಿಗುಣದ ಆಸೆಗೆ ಮರುಳಾಗಿ 3 ಲಕ್ಷ 21 ಸಾವಿರ ರೂಪಾಯಿ ಹಣ ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ.
ಬ್ಲಾಕ್ ಚೈನ್ ಎಂಬ ಕಂಪನಿಯ ಲಿಂಕ್ ಅನ್ನು ನಂಬಿ ಹಣ ದ್ವಿಗುಣದ ಆಸೆಗೆ ಮರುಳಾದ ಶಿಕ್ಷಕಿ ಅವರು ಹೇಳಿದಂತೆ ಕೇಳಿ ಕೊನೆಗೆ ಹಣ ಕಳೆದುಕೊಂಡಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಮುಷ್ಟೂರು ಗ್ರಾಮದ ನಿವಾಸಿ ಕೆ.ರಾಗಿಣಿ ಎಂಬ ಖಾಸಗಿ ಶಾಲಾ ಶಿಕ್ಷಕಿ ಮೋಸ ಹೋಗಿರುವ ಮಹಿಳೆಯಾಗಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಬ್ಲಾಕ್ ಚೈನ್ ಎಂಬ ಕಂಪನಿಯ ಲಿಂಕ್ ಬಂದಿದ್ದು, ಅದನ್ನು ಶಿಕ್ಷಕಿ ಓಪನ್ ಮಾಡಿದ್ದಾರೆ. ಆಗ ಆ್ಯಪ್ನಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಹಣ ದ್ವಿಗುಣಗೊಳಿಸಿ ಕೊಡುವುದಾಗಿ ಮಾಹಿತಿ ಬಂದಿದೆ. ಹೀಗಾಗಿ ಬಿಡುವಿನ ಸಮಯದಲ್ಲಿ ಹಣವನ್ನು ಹಾಕಿ ಹೆಚ್ಚಿನ ಹಣವನ್ನು ಸಂಪಾದನೆ ಮಾಡೋಣವೆಂದು ಯೋಚನೆ ಮಾಡಿದ ಶಿಕ್ಷಕಿ, ಬ್ಯಾಂಕ್ ಖ್ಯಾತೆಗಳಿಂದ ವಿವಿಧ ದಿನಾಂಕಗಳಲ್ಲಿ ಒಟ್ಟು 3,21,000 ರೂ, ಹಣವನ್ನು ಹೂಡಿಕೆ ಮಾಡಿದ್ದಾರೆ.
ಇದಾದ ನಂತರ ಬ್ಲಾಕ್ ಚೈನ್ ಆ್ಯಪ್ ಅಕೌಂಟ್ನಲ್ಲಿ ರಾಗಿಣಿ ಹೆಸರಿನಲ್ಲಿ 10 ಲಕ್ಷ ಹಣ ಇರುವುದಾಗಿ ಕಾಣಿಸಿದೆಯಂತೆ. ಇದರಿಂದ ಸಂತಸಗೊಂಡ ಶಿಕ್ಷಕಿ ಕೊನೆಗೆ ಹಣ ಡ್ರಾ ಮಾಡಲು ಯತ್ನಿಸಿದಾಗ ಸಾಧ್ಯವಾಗಿಲ್ಲ. ಇದರಿಂದ ಅನುಮಾನಗೊಂಡು ಕಂಪನಿಯವರನ್ನು ಸಂಪರ್ಕಿಸಲು ಯತ್ನಿಸಿದಾಗ ಯಾರೂ ಸಂಪರ್ಕಕ್ಕೆ ಸಿಕ್ಕಿಲ್ಲ. ಕೊನೆಗೆ ಮೋಸ ಹೋಗಿರುವ ಬಗ್ಗೆ ಅವರಿಗೆ ಅರಿವಾಗಿದೆ.
ಇದೀಗ ಶಿಕ್ಷಕಿ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಚಿಕ್ಕಬಳ್ಳಾಪುರ ಸಿಇಎನ್ ಠಾಣೆ ಪೊಲೀಸರು ಐಟಿ ಕಾಯ್ದೆಯ ಕಲಂ 66(ಡಿ) ಮತ್ತು ಭಾರತೀಯ ದಂಡಸಂಹಿತೆಯ ಕಲಂ 419, 420 ರೀತಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.