ಹೊಸ ದಿಗಂತ ವರದಿ,ಮಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಭಿವೃದ್ಧಿ ಕಡೆಗಣಿಸಿದೆ. ಹತ್ಯೆ -ಆತ್ಮಹತ್ಯೆಗಳೇ ಈ ಸರ್ಕಾರದ ಹೆಗ್ಗುರುತಾಗಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಮತ್ತು ಗ್ರಾಹಕ ವ್ಯವಹಾರಗಳು ಹಾಗೂ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಪ್ರಹ್ಲಾದ್ ವಿ. ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದೆಡೆ ವಾಲ್ಮೀಕಿ ಹಗರಣ, ಮುಡಾ ಹಗರಣ, ಅಕಾರಿಗಳ ಆತ್ಮಹತ್ಯೆ ಇವೆಲ್ಲವೂ ಸರ್ಕಾರದ ಸ್ಥಿತಿಯನ್ನು ಬಟಾ ಬಯಲು ಮಾಡಿದೆ. ಈ ಮಧ್ಯೆ ಆಡಳಿತ ನಡೆಸುವವರು ದುರಂಹಕಾರ-ದುವರ್ತನೆಯ ಹೇಳಿಕೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆಯ ಸಂದರ್ಭ ‘ಮೊಹಬತ್ ಕಾ ದುಖಾನ್’ ಹೇಳಿಕೆ ನೀಡಿದವರು ಈಗ ರಾಜ್ಯವನ್ನು ಹತ್ಯಾ-ಆತ್ಮಹತ್ಯೆ ದುಖಾನ್ ಮಾಡಿದ್ದಾರೆ. ಕಟಾ-ಕಟ್ ಹೇಳಿಕೆ ನೀಡಿದವರು ವಾಲ್ಮೀಕಿ ನಿಗಮದ ಹಣ ನುಂಗಿ ಹಾಕಿದ್ದಾರೆ. ಎಸ್‌ಪಿ-ಎಸ್‌ಟಿ ಹಣವನ್ನು ಗ್ಯಾರಂಟಿಗೆ ವರ್ಗಾಯಿಸಿದ್ದಾರೆ. ದುರಾಡಳಿತ-ಭ್ರಷ್ಟಾಚಾರದಲ್ಲಿ ರಾಜ್ಯ ಸರ್ಕಾರ ಮುಳುಗಿದೆ ಎಂದರು.