August 4, 2026
Tuesday, August 4, 2026
spot_img

ಕಿಂಗ್ ಖಾನ್‌ಗೆ ಇಷ್ಟವಂತೆ ಮಂಗಳೂರಿನ ನೀರು ದೋಸೆ! ಕರಾವಳಿ ನಂಟಿನ ಬಗ್ಗೆ SRK ಭಾವುಕ ನುಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಚಿತ್ರರಂಗದ ಅಪ್ರತಿಮ ನಟ ಶಾರುಖ್ ಖಾನ್ ಇತ್ತೀಚೆಗೆ ಮಂಗಳೂರಿಗೆ ಭೇಟಿ ನೀಡಿ ಕರಾವಳಿ ಜನರ ಮನಗೆದ್ದಿದ್ದಾರೆ. ತಮ್ಮ ಮೊದಲ ಸೂಪರ್ ಹಿಟ್ ಸಿನಿಮಾ ‘ದೀವಾನಾ’ ಬಿಡುಗಡೆಯಾಗಿ 35 ವರ್ಷ ಸಂದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಅವರು ಆಗಮಿಸಿದ್ದರು.

‘ನಮಸ್ಕಾರ ಕುಡ್ಲ’ ಎಂದ ಬಾದ್‌ಶಾ!

ವೇದಿಕೆ ಮೇಲೆ ‘ನಮಸ್ಕಾರ ಕುಡ್ಲ, ಎಂಚ ಉಲ್ಲಾರ್’ ಎಂದು ತುಳುವಿನಲ್ಲೇ ಮಾತು ಆರಂಭಿಸಿದ ಶಾರುಖ್, ನೆರೆದಿದ್ದ ಸಾವಿರಾರು ಅಭಿಮಾನಿಗಳನ್ನು ರೋಮಾಂಚನಗೊಳಿಸಿದರು. ತಮಗೆ ಕರಾವಳಿಯ ಪ್ರಸಿದ್ಧ ‘ನೀರು ದೋಸೆ’ ಎಂದರೆ ಪಂಚಪ್ರಾಣ ಎಂದ ಅವರು, ಮಂಗಳೂರಿನ ವಿಭಿನ್ನ ಸಂಸ್ಕೃತಿ ಮತ್ತು ಮುಂಬೈ ನಡುವಿನ ನಂಟನ್ನು ಶ್ಲಾಘಿಸಿದರು.

ಕರಾವಳಿಯಲ್ಲಿದೆ ಶಾರುಖ್ ಬಾಲ್ಯದ ನಂಟು!

1960ರ ದಶಕದಲ್ಲಿ ಶಾರುಖ್ ಅವರ ತಾತ ಮಂಗಳೂರು ಬಂದರಿನಲ್ಲಿ ಮುಖ್ಯ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಶಾರುಖ್ ತಮ್ಮ ಬಾಲ್ಯದ ಐದು ವರ್ಷಗಳನ್ನು ಮಂಗಳೂರಿನಲ್ಲೇ ಕಳೆದಿದ್ದರು. ಅಜ್ಜಿಯ ಮಡಿಲಲ್ಲಿ ಬೆಳೆದ ಅವರು, ಇಲ್ಲಿನ ಶಾಲೆಯಲ್ಲೂ ಓದಿದ್ದರು. ವೇದಿಕೆ ಮೇಲೆ ತಮ್ಮ ಬಾಲ್ಯದ ಅಪರೂಪದ ಚಿತ್ರಗಳನ್ನು ಪ್ರದರ್ಶಿಸಿ ಅವರು ಹಳೆಯ ನೆನಪುಗಳಿಗೆ ಜಾರಿದರು.

ನಟನಾಗದಿದ್ದರೆ ಇಲ್ಲಿಯೇ ಶಿಕ್ಷಕನಾಗುತ್ತಿದ್ದೆ!

“ನಾನು ಒಂದು ವೇಳೆ ಸಿನಿಮಾ ರಂಗಕ್ಕೆ ಬಾರದೆ ಹೋಗಿದ್ದರೆ, ಮಂಗಳೂರಿನಲ್ಲೇ ನೆಲೆಸಿ ಶಿಕ್ಷಕನಾಗುತ್ತಿದ್ದೆ. ಮಕ್ಕಳಿಗೆ ಪಾಠ ಮಾಡುವುದೆಂದರೆ ನನಗೆ ತುಂಬಾ ಇಷ್ಟ. ಇಲ್ಲಿನ ಸೇಂಟ್ ಅಲೋಶಿಯಸ್, ಮೌಂಟ್ ಕಾರ್ಮಲ್ ಅಥವಾ ಶಾರದಾ ವಿದ್ಯಾಮಂದಿರದಲ್ಲಿ ಟೀಚರ್ ಆಗಿ ನೆಮ್ಮದಿಯ ಜೀವನ ನಡೆಸುತ್ತಿದ್ದೆ” ಎಂದು ಕಿಂಗ್ ಖಾನ್ ತಮ್ಮ ಮನದ ಆಸೆಯನ್ನು ಬಿಚ್ಚಿಟ್ಟರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !