July 2, 2026
Thursday, July 2, 2026
spot_img

ಇಂಗ್ಲೆಂಡ್ ಏಕದಿನ ಸರಣಿಗೆ ಕಿಂಗ್ ಕೊಹ್ಲಿ ಭರ್ಜರಿ ಸಿದ್ಧತೆ: ವೈರಲ್ ಆಯ್ತು ನೆಟ್ಸ್ ವಿಡಿಯೋ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಹಾಗೂ ಇಂಗ್ಲೆಂಡ್‌ ನಡುವೆ ಸದ್ಯ 5 ಪಂದ್ಯಗಳ ಟಿ20 ಸರಣಿ ನಡೆಯುತ್ತಿದ್ದು, ಇದರ ಬೆನ್ನಲ್ಲೇ 3 ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಜುಲೈ 14 ರಿಂದ ನಡೆಯಲಿರುವ ಈ ಸರಣಿಗೆ ಟೀಂ ಇಂಡಿಯಾ ಪ್ರಕಟಗೊಂಡಿದೆ. ಗಾಯದ ಸಮಸ್ಯೆಯಿಂದಾಗಿ ಅಫ್ಘಾನಿಸ್ತಾನ ಸರಣಿಯಿಂದ ಹೊರಗುಳಿದಿದ್ದ 37 ವರ್ಷದ ವಿರಾಟ್ ಕೊಹ್ಲಿ, ಇದೀಗ ಸಂಪೂರ್ಣ ಫಿಟ್ ಆಗಿದ್ದು ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

ಸಂಜಯ್ ಬಂಗಾರ್ ಮಾರ್ಗದರ್ಶನದಲ್ಲಿ ವಿಶೇಷ ತರಬೇತಿ

ಪ್ರಸ್ತುತ ಇಂಗ್ಲೆಂಡ್‌ನಲ್ಲಿರುವ ವಿರಾಟ್ ಕೊಹ್ಲಿ, ಭಾರತ ತಂಡದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅವರ ನೇತೃತ್ವದಲ್ಲಿ ಕಠಿಣ ತರಬೇತಿ ಆರಂಭಿಸಿದ್ದಾರೆ. ಇತ್ತೀಚೆಗಷ್ಟೇ ಕೊಹ್ಲಿ ಅಲಿಬಾಗ್ ಹಾಗೂ ಮುಂಬೈನಲ್ಲಿ ವಿಶೇಷ ಬ್ಯಾಟಿಂಗ್ ಶಿಬಿರ ಮುಗಿಸಿದ್ದರು. ಇದೀಗ ಲಂಡನ್‌ನಲ್ಲೂ ಈ ಜೋಡಿ ತಾಂತ್ರಿಕ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ನೆಟ್ಸ್‌ನಲ್ಲಿ ಬೆವರು ಹರಿಸುತ್ತಿದೆ. ಕೊಹ್ಲಿ ಭುಜದ ಮೇಲೆ ಕಿಟ್ ಬ್ಯಾಗ್ ಹೊತ್ತು ಮೈದಾನಕ್ಕೆ ಬರುವ ಹಾಗೂ ಬಂಗಾರ್ ಜೊತೆ ಚರ್ಚಿಸುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

2027ರ ಏಕದಿನ ವಿಶ್ವಕಪ್‌ ಮೇಲೆ ಕಣ್ಣು

ಸಂಜಯ್ ಬಂಗಾರ್ ಅವರು 2014 ರಿಂದ 2019 ರವರೆಗೆ ಭಾರತ ತಂಡದ ಕೋಚಿಂಗ್ ಸಿಬ್ಬಂದಿಯಾಗಿದ್ದಾಗ ಕೊಹ್ಲಿ ಅದ್ಭುತ ಫಾರ್ಮ್‌ನಲ್ಲಿದ್ದರು. ಟೆಸ್ಟ್ ಮತ್ತು ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಕೊಹ್ಲಿಗೆ, 2027ರ ಏಕದಿನ ವಿಶ್ವಕಪ್ ದೃಷ್ಟಿಯಿಂದ ಈ ಸರಣಿ ಅತ್ಯಂತ ಮಹತ್ವದ್ದಾಗಿದೆ. ಚಾಂಪಿಯನ್ಸ್ ಟ್ರೋಫಿ ಬಳಿಕ ಕೊಹ್ಲಿ ಆಡಲಿರುವ ಮೊದಲ ಅಂತರರಾಷ್ಟ್ರೀಯ ಪಂದ್ಯ ಇದಾಗಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !