ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಸ್ಕೃತಿ ಮತ್ತು ಪರಂಪರೆಯು ಒಂದು ಸಮುದಾಯದ ಗುರುತನ್ನು ಪ್ರತಿಬಿಂಬಿಸುವ ಮಹತ್ವದ ಅಂಶಗಳಾಗಿವೆ. ಅದನ್ನು ಪೀಳಿಗೆಯಿಂದ ಪೀಳಿಗೆಗೆ ಸಾಗಿಸುವ ವಿವಿಧ ಮಾರ್ಗಗಳಿವೆ. ಆದರೆ, ಜಾನಪದ ಕಲೆ, ಐತಿಹಾಸಿಕ ಕಥೆಗಳು, ಮತ್ತು ಸಮುದಾಯದ ಪರಂಪರೆಯನ್ನು ಆಟಿಕೆಗಳ ಮೂಲಕ ಪರಿಚಯಿಸುವ ಆಲೋಚನೆ ಸಾಕಷ್ಟು ಅಪರೂಪ. ಅಸ್ಸಾಂನ ಬೋಡೋ ಸಮುದಾಯದ ಯುವಕ ಕಿರಾತ್ ಬ್ರಹ್ಮ ತನ್ನ ಊರಿನ ಸಂಸ್ಕೃತಿಯನ್ನು ಜಗತ್ತಿಗೆ ತಲುಪಿಸಲು ಪ್ಲಾಸ್ಟಿಕ್ ಮುಕ್ತ ಸಾಫ್ಟ್ ಟಾಯ್‌ಗಳ ಮೂಲಕ ಹೊಸ ದಾರಿಗೆ ಇಳಿದಿದ್ದಾನೆ. ಆತನ ಪ್ರಯತ್ನ ಹೇಗಿದೆ ಎಂಬುದನ್ನು ಈ ಕತೆ ಮೂಲಕ ತಿಳಿಯೋಣ.
ಅಸ್ಸಾಂನ ಬಕ್ಸ ಜಿಲ್ಲೆಯ ಒಂದು ಸಣ್ಣ ಹಳ್ಳಿಯಲ್ಲಿ ಬೋಡೋ ಜನಾಂಗದಲ್ಲಿ ಹುಟ್ಟಿದ ಯುವಕ ಕಿರಾತ್ ಬ್ರಹ್ಮ. ಹುಟ್ಟಿದಾಗಿನಿಂದಲೇ ಬೋಡೋ ಸಂಸ್ಕೃತಿ ಹಾಗೂ ಕಥೆಗಳನ್ನು ಪರಿಚಯಿಸಿಕೊಂಡು ಬೆಳೆದ ಕಿರಾತ್ ನಿಗೆ, ತನ್ನ ದೇಶದಲ್ಲಿ ಈಶಾನ್ಯ ರಾಜ್ಯಗಳ ಬಗ್ಗೆ ಜನರಲ್ಲಿರುವ ಅರಿವಿನ ಕೊರತೆ ಮತ್ತು ತಾರತಮ್ಯದ ಬಗ್ಗೆ ತುಂಬಾ ಬೇಸರವಿತ್ತು.
ಅಹಮದಾಬಾದ್‌ನ ರಾಷ್ಟ್ರೀಯ ವಿನ್ಯಾಸ ಸಂಸ್ಥೆಯಲ್ಲಿ ಅನಿಮೇಷನ್ ನಲ್ಲಿ ಪದವಿ ಪಡೆದು ಕೆಲಸವನ್ನು ಗಿಟ್ಟಿಸಿಕೊಂಡೆ. ೨೦೨೦ರಲ್ಲಿ ಬಂದ ಕೋವಿಡ್ ನಿಂದಾಗಿ ನನ್ನ ಜೀವನ ಬದಲಾಯಿತು. ನನ್ನೂರಿಗೆ ಮರಳಿ ಬಂದೆ. ಯುವ ಪೀಳಿಗೆಗೆ ನಮ್ಮ ಬೋಡೋ ಸಂಸ್ಕೃತಿಯನ್ನು ಪರಿಚಯಿಸಲು ನಿರ್ಧರಿಸಿ, ಪ್ಲಾಸ್ಟಿಕ್ ಮುಕ್ತ ಸಾಫ್ಟ್ ಟಾಯ್ ಗಳನ್ನೂ ತಯಾರು ಮಾಡಲು ಪ್ರಾರಂಭಿಸಿದೆ ಎನ್ನುತ್ತಾರೆ ಕಿರಾತ್ ಬ್ರಹ್ಮ.
ಇದೆ ಕೆಲಸ ಮುಂದುವರಿದು ೨೦೨೧ರಲ್ಲಿ ನಾವು ಝಂಕ್ಲಾ ಸ್ಟುಡಿಯೋ ಪ್ರಾರಂಭಿಸಿದೆವು. ಈ ಸ್ಟುಡಿಯೋದಲ್ಲಿ ಬೋಡೋ ಬುಡಕಟ್ಟು ಕಥೆಗಳು ಮತ್ತು ಸಂಸ್ಕೃತಿಯನ್ನು ಚಿತ್ರಿಸುವ ಆಟಿಕೆಗಳನ್ನು ಸ್ವತಃ ಕೈಯಿಂದಲೇ ತಯಾರು ಮಾಡುತ್ತೇವೆ ಎನ್ನುತ್ತಾರೆ ಕಿರಾತ್.
ಆಟಿಕೆಗಳ ಹಿನ್ನಲೆ ವಿವರಿಸುತ್ತಾ ಬ್ರಿಟಿಷರ ವಿರುದ್ಧ ಹೋರಾಡಿದ ಬೋಡೋ ರಾಜಕುಮಾರಿಯ ಗೊಂಬೆಯಿಂದ ಹಿಡಿದು, ಪಕ್ಷಿಗಳು, ಪ್ರಾಣಿಗಳು ಮತ್ತು ಸ್ಮಾರಕ ವಸ್ತುಗಳ ಗೊಂಬೆ ಹಾಗೂ ಗಂಬಾರಿ ಸಿಕ್ಲಾರಂತಹ ಐತಿಹಾಸಿಕ ವ್ಯಕ್ತಿಗಳ ಪ್ರತಿಯೊಂದು ಆಟಿಕೆಗಳನ್ನು ಸಾಂಪ್ರದಾಯಿಕ ಉಡುಪು ಮತ್ತು ಪರಿಕರಗಳನ್ನು ಹೊಂದಿರುವಂತೆ ತಯಾರಿಸಲಾಗುತ್ತದೆ ಎನ್ನುತ್ತಾರೆ.
ನನ್ನ ಸಮುದಾಯದ ಮೌಲ್ಯವನ್ನು ಹೆಚ್ಚಿಸಲು ಹಾಗೂ ನಮ್ಮ ಸಂಸ್ಕೃತಿಯನ್ನು ಜಗತ್ತಿಗೆ ಪ್ರದರ್ಶಿಸಲು ಇದು ಉತ್ತಮ ಮಾರ್ಗ ಎಂದು ಕಿರಾತ್ ಬ್ರಹ್ಮ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.