ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್‌ಬಾಸ್ ಖ್ಯಾತಿಯ ಕಿರಿಕ್ ಕೀರ್ತಿ ಇದೇ ಮೊದಲ ಬಾರಿಗೆ ಡಿಪ್ರೆಶನ್ ಹಾಗೂ ಸೂಸೈಡ್ ಬಗ್ಗೆ ಮಾತನಾಡಿದ್ದಾರೆ. ಪ್ರೀತಿಸಿ ಮದುವೆಯಾದವಳಿಂದ ಬೇರೆಯಾದ ನಂತರ ಖಿನ್ನತೆ ಕಾಡಿತ್ತು ಎಂದು ಕೀರ್ತಿ ಹೇಳಿಕೊಂಡಿದ್ದಾರೆ.
ವಾಹಿನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ, ವಿವೇಕಾನಂದ ಜಯಂತಿ ಅಂಗವಾಗಿ ಯೂತ್ ಡೇ ಸಂಬಂಧ ಕಾಲೇಜಿಗೆ ಹೋಗಿ ವಿದ್ಯಾರ್ಥಿಗಳನ್ನು ಮಾತನಾಡಿಸಬೇಕಿತ್ತು. ಆಗ ಯಾರೂ ಬೈಟ್ ಕೊಡಲು ಮುಂದೆ ಬರಲಿಲ್ಲ. ನಂತರ ಅಲ್ಲಿದ್ದವರೊಬ್ಬರನ್ನು ಕೇಳಿದಾಗ ಅರ್ಪಿತಾಳನ್ನು ತೋರಿಸಿದರು. ಆಕೆ ಬಳಿ ಬೈಟ್ ಪಡೆದೆ, ಅದು ಪ್ರಸಾರ ಆಯ್ತು. ಅಲ್ಲಿಂದ ಶುರುವಾದ ಮಾತುಕತೆ, ಪ್ರೀತಿ-ಪ್ರೇಮ ಎಂದೆಲ್ಲಾ ಮುಂದುವರೆದು ಮದುವೆಯವರೆಗೂ ಬಂತು. ಆದರೆ ಆಕೆಯ ಮನೆಯಲ್ಲಿ ಮದುವೆಗೆ ವಿರೋಧಿಸಿದರು. ಎರಡು ವರ್ಷ ಪ್ರೀತಿಸಿದ್ವಿ. ಆದರೆ ಮದುವೆಗೆ ಅವರ ಮನೆಯಲ್ಲಿ ಸಿದ್ಧರಿರಲಿಲ್ಲ. ಕೊನೆಗೆ ಮನೆಯವರನ್ನು ವಿರೋಧಿಸಿಯೇ ಮದುವೆಯಾದ್ವಿ ಎಂಬ ಪ್ರೀತಿ, ಮದುವೆಯ ವಿಷಯವನ್ನು ತಿಳಿಸಿದ್ದಾರೆ.
ಮದುವೆಯಾದ ಬಳಿಕ ಅವರ ಮನೆಯವರೂ ನನ್ನನ್ನು ಅವಳಿಗಿಂತಲೂ ಹೆಚ್ಚಾಗಿ ಪ್ರೀತಿಸಿದರು. ನಮ್ಮಿಬ್ಬರ ದಾಂಪತ್ಯ ಜೀವನ ಸುಂದರವಾಗಿಯೇ ನಡೆದಿತ್ತು. ಹತ್ತು ವರ್ಷ ಎಲ್ಲವೂ ಚೆನ್ನಾಗಿತ್ತು. ಆದರೆ ಕೊನೆಗೆ ದಾಂಪತ್ಯ ಜೀವನ ಹೀಗೆಯೇ ಮುಂದುವರೆಯಲು ಸಾಧ್ಯವಿಲ್ಲ ಎನ್ನುವುದು ತಿಳಿದು ಪ್ರತ್ಯೇಕವಾಗಲು ನಿರ್ಧರಿಸಿದೆವು ಎಂದ ಕೀರ್ತಿ ಅವರು, ಅದಕ್ಕೆ ಕಾರಣ ಯಾರಿಗೂ ಹೇಳಲ್ಲ, ನಮ್ಮಿಬ್ಬರಿಗೇ ಗೊತ್ತು ಎಂದಿದ್ದಾರೆ. ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡುತ್ತಾರೆ. ಆದರೆ ನಿಜ ಏನು ಎನ್ನುವುದು ನಮಗಷ್ಟೇ ಗೊತ್ತು ಎಂದಿರುವ ಅವರು, ವಿಚ್ಛೇದನದ ಬಳಿಕ ಖಿನ್ನತೆಗೆ ಜಾರಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಪಟ್ಟೆ ಎಂದೂ ಹೇಳಿದ್ದಾರೆ.
ನಾನು ಸತ್ತೇ ಹೋದೆ ಎಂದು ಕೆಲವು ಕಡೆ ಸುದ್ದಿ ಕೂಡ ಬಂತು. ಆದರೆ ಸಾಯಲಿಲ್ಲ. ಬದುಕುವುದು ನನಗೆ ಬೇಡವಾಗಿತ್ತು. ಮನೆಯಲ್ಲಿಯೂ ಯಾರಿಗೂ ಹೇಳದೇ ಎಲ್ಲೋ ಹೋಗುತ್ತೇನೆ ಎಂದು ಹೇಳಿ ಸಾಯಲು ಬಯಸಿದೆ. ಆದರೆ ಬದುಕಿದೆ. ಬಳಿಕ ಈ ನಿರ್ಧಾರ ಸರಿಯಲ್ಲ ಎನಿಸಿ ನನ್ನ ಮನಸ್ಸನ್ನು ಬದಲಿಸಿದೆ. ಈಗ ಎಲ್ಲವೂ ಚೆನ್ನಾಗಿದೆ ಎಂದಿದ್ದಾರೆ. ಅಂದು ಸಾಯುವ ನಿರ್ಧಾರ ಮಾಡಿ ನನ್ನ ಡೆತ್ ನೋಟ್ ಕೂಡ ಟೈಪ್ ಮಾಡಿದ್ದೆ.ಬಟ್ ಅದನ್ನು ಡಿಲೀಟ್ ಮಾಡಿ ಮಗನಿಗೋಸ್ಕರ ಬದುಕಿದೆ ಎಂದಿದ್ದಾರೆ.