ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿರುದ್ಯೋಗಿಗಳ ಮೇಲೆ ಸಿಎಂ ಕೆಸಿಆರ್ ಮಾಡುತ್ತಿರುವ ವಂಚನೆ ಖಂಡಿಸಿ ತೆಲಂಗಾಣ ಬಿಜೆಪಿ ಪ್ರತಿಭಟನೆಗಿಳಿದಿದ್ದು, ಇಂದು ಜಿಲ್ಲಾ ಮತ್ತು ಮಂಡಲ ಕೇಂದ್ರಗಳಲ್ಲಿ ಪ್ರತಿಭಟನೆಗೆ ಕರೆ ನೀಡಿದೆ. ಕೇಂದ್ರ ಸಚಿವ ಹಾಗೂ ಬಿಜೆಪಿ ತೆಲಂಗಾಣ ರಾಜ್ಯಾಧ್ಯಕ್ಷ ಕಿಶನ್ ರೆಡ್ಡಿ ಬಿಜೆಪಿ ಕಚೇರಿಯಲ್ಲಿಯೇ ಉಪವಾಸ ಸತ್ಯಾಗ್ರಹ ಕುಳಿತಿದ್ದಾರೆ. ಹೈದರಾಬಾದ್‌ನ ಇಂದಿರಾ ಪಾರ್ಕ್‌ನಲ್ಲಿ ಪೊಲೀಸರು ಧರಣಿಗೆ ಅಡ್ಡಿಯುಂಟು ಮಾಡಿದ್ದರಿಂದ ಕಚೇರಿಯಲ್ಲಿಯೇ ಕೆಸಿಆರ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ಕೆಸಿಆರ್ ತಮ್ಮ 9 ವರ್ಷಗಳ ಆಡಳಿತದಲ್ಲಿ ಸರ್ಕಾರಿ ನೌಕರರಿಗೆ ಮೋಸ ಮಾಡಿದ್ದಾರೆ ಎಂದು ಕಿಶನ್ ರೆಡ್ಡಿ ಇಂದಿರಾ ಪಾರ್ಕ್ ಧರಣಿ ಚೌಕ್ ನಲ್ಲಿ 24 ಗಂಟೆಗಳ ಉಪವಾಸ ಆರಂಭಿಸಿದರು. ಇಂದು ಬೆಳಗ್ಗೆ 6ರವರೆಗೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಪೊಲೀಸರಿಗೆ ತಿಳಿಸಿದರೂ ನಿನ್ನೆ ಸಂಜೆಯೇ ಪಾರ್ಕ್ ಬಳಿ ಇದ್ದ ಟೆಂಟ್ ಕಿತ್ತೊಗೆದು ಕಿಶನ್ ರೆಡ್ಡಿಯನ್ನು ವಶಕ್ಕೆ ಪಡೆದರು. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೂರವಾಣಿ ಮೂಲಕ ಕಿಶನ್ ರೆಡ್ಡಿ ಜೊತೆ ಮಾತನಾಡಿ, ಕೆಸಿಆರ್ ಸರ್ಕಾರದ ವಿರುದ್ಧ ಹೋರಾಟ ಮುಂದುವರಿಸುವಂತೆ ಸಲಹೆ ನೀಡಿದರು. ಹೋರಾಟಕ್ಕೆ ಕೇಂದ್ರ ಪಕ್ಷದ ಸಂಪೂರ್ಣ ಬೆಂಬಲವಿದೆ ಎಂದು ಸ್ಪಷ್ಟಪಡಿಸಿದರು. ಪಕ್ಷದ ಸಂಸದ ಬಂಡಿ ಸಂಜಯ್ ಕಿಶನ್ ರೆಡ್ಡಿ ಅವರ ಉಪವಾಸ ಸತ್ಯಾಗ್ರಹವನ್ನು ಪೊಲೀಸರು ಮುರಿದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅಮಿತ್ ಶಾ ಶಾಂತಿಯುತವಾಗಿ ಧರಣಿ ಮಾಡುತ್ತಿದ್ದರೆ ಅದಕ್ಕೂ ಅಡ್ಡಿಪಡಿಸುತ್ತಾರಾ ಎಂದು ಪ್ರಶ್ನಿಸಿದರು.