ಅಡುಗೆಮನೆಯಲ್ಲಿ ಅತಿ ಹೆಚ್ಚು ಬಳಸಲಾಗುವ ಹಣ್ಣುಗಳಲ್ಲಿ ನಿಂಬೆಹಣ್ಣು ಪ್ರಮುಖವಾದದ್ದು. ಆದರೆ ಇದು ಸ್ವಾಭಾವಿಕವಾಗಿ ಆಮ್ಲೀಯ ಗುಣ ಹೊಂದಿರುವುದರಿಂದ ಸರಿಯಾಗಿ ಸಂಗ್ರಹಿಸದಿದ್ದರೆ ಬೇಗ ಹಾಳಾಗುವ ಮತ್ತು ಒಣಗಿಹೋಗುವ ಸಾಧ್ಯತೆ ಹೆಚ್ಚು. ಸಾಮಾನ್ಯವಾಗಿ ನಿಂಬೆಯನ್ನು ಕೋಣೆಯ ಉಷ್ಣಾಂಶದಲ್ಲಿ ಇಡುವುದು ಸಾಮಾನ್ಯ. ಆದರೆ ಹೆಚ್ಚು ದಿನ ಹೀಗೆ ಇಟ್ಟರೆ ಹಣ್ಣು ಗಟ್ಟಿಯಾಗಿ, ರಸ ಕಡಿಮೆಯಾಗುತ್ತದೆ. ನಿಂಬೆಯನ್ನು ಹೆಚ್ಚು ದಿನ ತಾಜಾವಾಗಿಡಲು ಕೆಲವು ಸರಳ ವಿಧಾನಗಳನ್ನು ಅನುಸರಿಸಬಹುದು.
- ಗಾಜಿನ ಜಾರ್ ನಲ್ಲಿ ಸಂಗ್ರಹ: ನಿಂಬೆಯನ್ನು ನೀರಿನಿಂದ ತುಂಬಿದ ಗಾಜಿನ ಜಾರ್‌ನಲ್ಲಿ ಇಟ್ಟು ರೆಫ್ರಿಜರೇಟರ್‌ನಲ್ಲಿ ಇರಿಸಿದರೆ ಹಣ್ಣು ದೀರ್ಘಕಾಲ ತಾಜಾ ಮತ್ತು ರಸಭರಿತವಾಗಿರುತ್ತದೆ.
- ಈ ಹಣ್ಣುಗಳೊಟ್ಟಿಗೆ ಇಡಬೇಡಿ: ಸೇಬು ಮತ್ತು ಬಾಳೆಹಣ್ಣಿನೊಂದಿಗೆ ನಿಂಬೆಯನ್ನು ಇಡುವುದನ್ನು ತಪ್ಪಿಸಬೇಕು. ಇವುಗಳಿಂದ ಹೊರಬರುವ ಎಥಿಲೀನ್ ಹಾರ್ಮೋನ್ ನಿಂಬೆ ಬೇಗ ಹಾಳಾಗಲು ಕಾರಣವಾಗುತ್ತದೆ.
- ಗಾಳಿಯಾಡದ ಚೀಲ: ಸೀಲ್ ಮಾಡಿದ ಅಥವಾ ಗಾಳಿಯಾಡದ ಚೀಲದಲ್ಲಿ ನಿಂಬೆಯನ್ನು ಇಟ್ಟರೆ ಹಣ್ಣಿನ ರುಚಿ ಮತ್ತು ಪರಿಮಳ ಉಳಿದುಕೊಳ್ಳುತ್ತದೆ.
- ಪ್ಲಾಸ್ಟಿಕ್ ಕಂಟೈನರ್: ಪ್ಲಾಸ್ಟಿಕ್‌ನಲ್ಲಿ ಸುತ್ತಿ ಗಾಳಿಯಾಡದ ಡಬ್ಬಿಯಲ್ಲಿ ನಿಂಬೆಯನ್ನು ಇಟ್ಟು ಫ್ರಿಜ್‌ನಲ್ಲಿ ಸಂಗ್ರಹಿಸಿದರೆ ಹೆಚ್ಚು ದಿನ ತಾಜಾವಾಗಿರುತ್ತದೆ.
- ಅಲ್ಯೂಮಿನಿಯಂ ಫಾಯಿಲ್: ಪ್ರತಿ ನಿಂಬೆಯನ್ನು ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಸುತ್ತಿ ಇಟ್ಟರೆ ಹಣ್ಣಿನ ತೇವಾಂಶ ಕಾಪಾಡಿಕೊಂಡು ಒಣಗುವುದನ್ನು ತಡೆಯಬಹುದು.