ಹೊಸದಿಗಂತ ವರದಿ ಬೆಳಗಾವಿ :
ರಾಣಿ ಕಿತ್ತೂರು ಚೆನ್ನಮ್ಮನ ಶೌರ್ಯ, ಧೈರ್ಯ ಮತ್ತು ಸ್ವಾಭಿಮಾನದ ಪರಂಪರೆಯನ್ನು ಸ್ಮರಿಸುವ 202ನೇ ಕಿತ್ತೂರು ಉತ್ಸವವನ್ನು ಕಾಕತಿಯಲ್ಲಿ ಶುಕ್ರವಾರ ಸಂಭ್ರಮದಿಂದ ಆಚರಿಸಲಾಯಿತು. ತಂದೆ-ತಾಯಿಗಳು ತಮ್ಮ ಮಕ್ಕಳನ್ನು ರಾಣಿ ಚೆನ್ನಮ್ಮನ ಆದರ್ಶಗಳಂತೆ ಬೆಳೆಸಿ, ದೇಶಕ್ಕೆ ಮಾದರಿಯಾಗುವಂತೆ ರೂಪಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಕರೆ ನೀಡಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಕಾಕತಿ ಗ್ರಾಮ ಪಂಚಾಯಿತಿ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಉತ್ಸವ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾಕತಿಯಲ್ಲಿ ತಾಂತ್ರಿಕ ಸಮಸ್ಯೆಗಳಿಂದ ಸ್ಥಗಿತಗೊಂಡಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಉತ್ತೇಜನ ನೀಡಲಾಗುವುದು. ಇಲ್ಲಿ ಎಂಟು ಕೊಠಡಿಗಳ ಸರ್ಕಾರಿ ಶಾಲಾ ಕಟ್ಟಡ ನಿರ್ಮಿಸಲಾಗುವುದು ಎಂದರು.

ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡುತ್ತಿದ್ದು, ರಾಣಿ ಚೆನ್ನಮ್ಮನ ಧೈರ್ಯ, ನಾಯಕತ್ವ ಮತ್ತು ಹೋರಾಟದ ಮನೋಭಾವವನ್ನು ಇಂದಿನ ಪೀಳಿಗೆಗೆ ಪರಿಚಯಿಸುವುದು ಅಗತ್ಯ ಎಂದು ಹೇಳಿದರು.
ಮುಕ್ತಿಮಠದ ಧರ್ಮಶ್ರೀ ತಪೋರತ್ನ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ರಾಣಿ ಚೆನ್ನಮ್ಮನ ಸಾಹಸಗಳು ಎಲ್ಲರಿಗೂ ಪ್ರೇರಣೆಯಾಗಿವೆ. ಸಾಂಗ್ಲಿ, ಕಾಕತಿ ಮತ್ತು ಶಹಾಪುರ ಸಂಸ್ಥಾನಗಳಿಗೆ ಸಂಬಂಧಿಸಿದ ಐತಿಹಾಸಿಕ ಪ್ರದೇಶಗಳನ್ನು ಕಿತ್ತೂರಿನ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು ಎಂದು ತಿಳಿಸಿದರು.

ಕಾಕತಿ ಶಿವಪೂಜಿಮಠದ ರಾಚಯ್ಯ ಸ್ವಾಮೀಜಿ, ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಮಹಿಳೆ ಚೆನ್ನಮ್ಮನ ತ್ಯಾಗ ಮತ್ತು ಹೋರಾಟವನ್ನು ದೇಶದ ಜನರಿಗೆ ಪರಿಚಯಿಸಬೇಕು ಎಂದರು. ಸಾಹಿತಿ ರಜನಿ ಜಿರಗ್ಯಾಳ ಅವರು, ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮುನ್ನವೇ ಬ್ರಿಟಿಷರ ವಿರುದ್ಧ ಹೋರಾಡಿದ ಚೆನ್ನಮ್ಮನ ಸಾಹಸಗಾಥೆ ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ ಎಂದು ಹೇಳಿದರು.
ಉತ್ಸವದ ಅಂಗವಾಗಿ ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬೈಲಹೊಂಗಲದಿಂದ ವೀರಜ್ಯೋತಿ ತಂದ ತಂಡದ ಸದಸ್ಯರನ್ನೂ ಗೌರವಿಸಲಾಯಿತು.
ಇದನ್ನೂ ಓದಿ:
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸಚಿವ ಸತೀಶ್ ಜಾರಕಿಹೊಳಿ ವೀರಜ್ಯೋತಿಯನ್ನು ಬರಮಾಡಿಕೊಂಡು ಉತ್ಸವಕ್ಕೆ ಚಾಲನೆ ನೀಡಿದರು. ಕಾಕತಿ ಬಸ್ ನಿಲ್ದಾಣದಿಂದ ರಾಣಿ ಚೆನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಭಾವಚಿತ್ರಗಳೊಂದಿಗೆ ಅದ್ಧೂರಿ ಮೆರವಣಿಗೆ ನಡೆಯಿತು. ವಿವಿಧ ಕಲಾತಂಡಗಳು, ಕುಂಭಮೇಳ, ವಾದ್ಯಮೇಳ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಪಥಸಂಚಲನ ಉತ್ಸವದ ಸಂಭ್ರಮ ಹೆಚ್ಚಿಸಿತು.
ಕಾರ್ಯಕ್ರಮದಲ್ಲಿ ಶಾಸಕ ಆಸಿಫ್ ರಾಜು ಸೇಠ್, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು, ಪೊಲೀಸ್ ಆಯುಕ್ತ ಪ್ರಕಾಶ್ ನಿಕಮ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.



