August 12, 2026
Wednesday, August 12, 2026
spot_img

ಕಿತ್ತೂರು ಪೊಲೀಸರ ಭರ್ಜರಿ ಕಾರ್ಯಾಚರಣೆ: ಒಂದೇ ಕೇಸ್‌ನಿಂದ ಬಯಲಾಯ್ತು 43 ಬೈಕ್ ಕಳ್ಳತನ

ಹೊಸದಿಗಂತ ವರದಿ ಬೆಳಗಾವಿ:

ಬೆಳಗಾವಿ, ಧಾರವಾಡ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸರಣಿ ಮೋಟಾರ್ ಸೈಕಲ್ ಕಳ್ಳತನ ನಡೆಸುತ್ತಿದ್ದ ಆರೋಪಿಯನ್ನು ಕಿತ್ತೂರು ಪೊಲೀಸರು ಬಂಧಿಸಿದ್ದು, ಆತನಿಂದ ಬರೋಬ್ಬರಿ ₹30 ಲಕ್ಷ ಮೌಲ್ಯದ 43 ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ. ಒಂದೇ ಪ್ರಕರಣದ ತನಿಖೆ ವೇಳೆ ಅಂತರ್ ಜಿಲ್ಲಾ ಮಟ್ಟದಲ್ಲಿ ನಡೆದಿದ್ದ ಹಲವು ಬೈಕ್ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿರುವುದು ಪೊಲೀಸರ ಕಾರ್ಯಾಚರಣೆಯ ಪ್ರಮುಖ ಯಶಸ್ಸಾಗಿದೆ.

ಎಪಿಎಂಸಿ ಗೇಟ್ ಬಳಿ ಬೈಕ್ ಕಳವು

ಕಿತ್ತೂರು ಪಟ್ಟಣದ ಎಪಿಎಂಸಿ ಗೇಟ್ ಬಳಿ ಜನವರಿ 12ರಂದು ನಿಲ್ಲಿಸಿದ್ದ ಹೀರೋ ಸ್ಪೆಂಡರ್ ಪ್ಲಸ್ ಬೈಕ್ ಕಳವಾಗಿತ್ತು. ಈ ಕುರಿತು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳವಾದ ಬೈಕ್ ಹಾಗೂ ಆರೋಪಿಯ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದರು.

ನಂಬರ್ ಪ್ಲೇಟ್ ಇಲ್ಲದ ಬೈಕ್‌ನಲ್ಲಿ ಸಿಕ್ಕಿಬಿದ್ದ ಆರೋಪಿ

ತಾಂತ್ರಿಕ ಮಾಹಿತಿ ಹಾಗೂ ವಿವಿಧ ಮೂಲಗಳಿಂದ ದೊರೆತ ಸುಳಿವುಗಳ ಆಧಾರದ ಮೇಲೆ ಪೊಲೀಸರು ಆರೋಪಿಯ ಚಲನವಲನದ ಮೇಲೆ ನಿಗಾ ಇರಿಸಿದ್ದರು. ಆಗಸ್ಟ್ 4ರಂದು ಎಂ.ಕೆ. ಹುಬ್ಬಳ್ಳಿ ಪಟ್ಟಣದ ಪಾರಿಶ್ವಾಡ ಕ್ರಾಸ್ ಬಳಿ ನಂಬರ್ ಪ್ಲೇಟ್ ಇಲ್ಲದ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಖಾನಾಪುರ ತಾಲೂಕಿನ ನಿಡಗಲ್ ಗ್ರಾಮದ 32 ವರ್ಷದ ನಾರಾಯಣ ಮನೋಹರ ಕದಮ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.

ಇದನ್ನೂ ಓದಿ:

ಎರಡು ವರ್ಷಗಳ ಕಳ್ಳತನ ಬಯಲು

ವಿಚಾರಣೆ ವೇಳೆ ಆರೋಪಿ ಕಳೆದ ಎರಡು ವರ್ಷಗಳಿಂದ ವಿವಿಧ ಜಿಲ್ಲೆಗಳ ಹಲವು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬೈಕ್‌ಗಳನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆತನ ಮಾಹಿತಿ ಆಧರಿಸಿ ವಿವಿಧೆಡೆಗಳಿಂದ ಒಟ್ಟು 43 ಮೋಟಾರ್ ಸೈಕಲ್‌ಗಳನ್ನು ಜಪ್ತಿ ಮಾಡಲಾಗಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಬೈಕ್?
ಬೆಳಗಾವಿ ಜಿಲ್ಲೆ: 25 ಬೈಕ್‌ಗಳು
ಬೆಳಗಾವಿ ಪೊಲೀಸ್ ಕಮಿಷನರೇಟ್: 8 ಬೈಕ್‌ಗಳು
ಧಾರವಾಡ ಜಿಲ್ಲೆ: 6 ಬೈಕ್‌ಗಳು
ಹುಬ್ಬಳ್ಳಿ-ಧಾರವಾಡ ಕಮಿಷನರೇಟ್: 1 ಬೈಕ್
ಗದಗ ಜಿಲ್ಲೆ: 2 ಬೈಕ್‌ಗಳು
ಉತ್ತರ ಕನ್ನಡ ಜಿಲ್ಲೆ: 2 ಬೈಕ್‌ಗಳು

ಕಿತ್ತೂರು, ಹಿರೇಬಾಗೇವಾಡಿ, ಸಂಕೇಶ್ವರ, ಕಲಘಟಗಿ, ಯಲ್ಲಾಪುರ, ಸವದತ್ತಿ, ಗರಗ, ಕುಂದಗೋಳ, ಹಳಿಯಾಳ, ಕಾಕತಿ, ಅಂಕಲಗಿ, ಲಕ್ಷ್ಮೇಶ್ವರ ಹಾಗೂ ಧಾರವಾಡ ಗ್ರಾಮೀಣ ಸೇರಿದಂತೆ ಹಲವು ಠಾಣೆಗಳ ವ್ಯಾಪ್ತಿಯಲ್ಲಿ ಕಳ್ಳತನ ನಡೆದಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಆರೋಪಿಗೆ ನ್ಯಾಯಾಂಗ ಬಂಧನ

ಮೂರು ದಿನಗಳ ಪೊಲೀಸ್ ಕಸ್ಟಡಿಯಲ್ಲಿದ್ದ ನಾರಾಯಣ ಮನೋಹರ ಕದಮ್‌ನನ್ನು ಆಗಸ್ಟ್ 7ರಂದು ಕಿತ್ತೂರಿನ ಸಿವಿಲ್ ಜಡ್ಜ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಪೊಲೀಸ್ ತಂಡಕ್ಕೆ ಅಧಿಕಾರಿಗಳ ಮೆಚ್ಚುಗೆ

ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಆರ್.ಬಿ. ಬಸರಗಿ ಹಾಗೂ ಡಾ. ವೀರಯ್ಯ ಹಿರೇಮಠ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ. ಕಿತ್ತೂರು ವೃತ್ತದ ಸಿಪಿಐ ಶಿವಾನಂದ ಬಿ. ಗುಡಗನಟ್ಟಿ, ಪಿಎಸ್‌ಐ ಭರತ್ ಎಸ್., ಪಿಎಸ್‌ಐ ಜಿ.ಜಿ. ಹಂಪಣ್ಣವರ ಸೇರಿದಂತೆ ಪೊಲೀಸ್ ಸಿಬ್ಬಂದಿ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಅಂತರಜಿಲ್ಲಾ ಮಟ್ಟದಲ್ಲಿ ನಡೆದಿದ್ದ ಸರಣಿ ಬೈಕ್ ಕಳ್ಳತನ ಪ್ರಕರಣಗಳನ್ನು ಭೇದಿಸಿ 43 ಬೈಕ್‌ಗಳನ್ನು ವಶಪಡಿಸಿಕೊಂಡ ಕಿತ್ತೂರು ಪೊಲೀಸ್ ತಂಡದ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !