Friday, March 24, 2023

Latest Posts

ಕಾರ್ಮಿಕರ ಪೂರ್ವಾಪರ ತಿಳಿದು ಕೆಲಸ ನೀಡಿ: ತೋಟ ಮಾಲೀಕರಿಗೆ ಪೊಲೀಸ್ ಇಲಾಖೆ ಸೂಚನೆ

ಹೊಸದಿಗಂತ ವರದಿ ಮಡಿಕೇರಿ:

ಕೃಷಿ ಚಟುವಟಿಕೆಗೆ ಕಾರ್ಮಿಕರನ್ನು ತೆಗೆದುಕೊಳ್ಳುವಾಗ ಅವರ ಪೂರ್ವಾಪರ ಅಪರಾಧ ಹಿನ್ನೆಲೆಯನ್ನು ತಿಳಿದುಕೊಂಡು ಕೆಲಸ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಜಿಲ್ಲೆಯ ಬೆಳೆಗಾರರಿಗೆ ಸಲಹೆ ನೀಡಿದ್ದಾರೆ.

ತಮ್ಮ ಕಚೇರಿಯಲ್ಲಿ ಕೊಡಗು ಜಿಲ್ಲೆಯ ಪ್ಲಾಂಟರ್ಸ್ ಅಸೋಸಿಯೇಷನ್ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕಾರ್ಮಿಕರನ್ನು ನೇಮಿಸಿಕೊಳ್ಳುವಾಗ ಅವರು ಹಿಂದೆ ಯಾವುದಾದರೂ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಹಾಗೂ ಅವರ ಭಾವಚಿತ್ರ, ಹೆಸರು ಮತ್ತು ವಿಳಾಸ, ಆಧಾರ್ ಕಾರ್ಡ್, ವಾಸ ಸ್ಥಳ ದೃಢೀಕರಣ ಪತ್ರ, ಮೊಬೈಲ್‌ ನಂಬರ್‌ಗಳನ್ನು ಪರಿಶೀಲಿಸಿ ದಾಖಲಾತಿಗಳನ್ನು ಪಡೆದು ನಿರ್ವಹಿಸಬೇಕೆಂದು ಸೂಚಿಸಿದರು.

ಅಪರಾಧ ಚಟುವಟಿಕೆಗಳು ನಡೆಯದಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ತೋಟದ ಒಳಗೆ ಹಾಗೂ ತೋಟದ ರಸ್ತೆ ಬದಿಯಲ್ಲಿ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಕಾರ್ಮಿಕರು ಏನಾದರೂ ಕಾನೂನು ಬಾಹಿರ ಕೃತ್ಯಗಳನ್ನು ನಡೆಸುತ್ತಿರುವ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಕೆ.ಎಸ್.ಪಿ ತಂತ್ರಾಂಶವನ್ನು ಬಳಸಿ ಕೂಡಲೇ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕೆಂದು ಸಲಹೆ ಮಾಡಿದರು.

ಕೃಷಿ ಚಟುವಟಿಕೆಗಳಲ್ಲಿ ತೋಟದಲ್ಲಿ ಕಾರ್ಮಿಕರು ಕಾಳುಮೆಣಸು ಕುಯ್ಯಲು ಹಾಗೂ ಮರ ಕಪಾತು ಮಾಡುವ ಸಂದರ್ಭದಲ್ಲಿ ಅಲ್ಯುಮಿನಿಯಂ ಏಣಿಗಳನ್ನು ಬಳಸುತ್ತಿದ್ದು, ವಿದ್ಯುತ್ ತಂತಿ ಹಾದು ಹೋಗಿರುವ ತೋಟಗಳಲ್ಲಿ ಅಜಾಗರೂಕತೆಯಿಂದ ಅಲ್ಯುಮಿನಿಯಂ ಏಣಿಗಳನ್ನು ಸಾಗಿಸುವ ಸಂಧರ್ಭದಲ್ಲಿ ವಿದ್ಯುತ್ ತಂತಿಗೆ ತಗುಲಿ ಕಾರ್ಮಿಕರು ಮೃತಪಟ್ಟ ಘಟನೆಗಳು ವರದಿಯಾಗಿರುತ್ತದೆ. ಇದನ್ನು ತಡೆಗಟ್ಟಲು ಅಲ್ಯುಮಿನಿಯಂ ಏಣಿಯ ಬದಲಾಗಿ ಮರದ, ಬಿದಿರಿನ ಅಥವಾ ಫೈಬರ್ (ಪ್ಲಾಸ್ಟಿಕ್) ಏಣಿಗಳನ್ನು ಬಳಸುವುದರೊಂದಿಗೆ ಸಂಭವಿಸಬಹುದಾದ ಪ್ರಾಣಾಪಾಯಗಳನ್ನು ತಡೆಗಟ್ಟಬಹುದು. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಸಬೇಕೆಂದು ಸೂಚನೆ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!