ಕೊಡಗು: ತೊರೆನೂರು ಗ್ರಾಮದಲ್ಲಿ ಸಂಭ್ರಮದ ಹೊನ್ನಾರು ಉತ್ಸವ

ಹೊಸದಿಗಂತ ವರದಿ, ಕುಶಾಲನಗರ(ಕೊಡಗು)
ಇಲ್ಲಿಗೆ ಸಮೀಪದ ತೊರೆನೂರು ಶ್ರೀ ಬಸವೇಶ್ವರ ದೇವಾಲಯ ಸಮಿತಿಯ ವತಿಯಿಂದ ಯುಗಾದಿ ಅಂಗವಾಗಿ ಸಾಂಪ್ರದಾಯಿಕವಾಗಿ ನಡೆಸಿಕೊಂಡು ಹೊನ್ನಾರು (ಚಿನ್ನದ ಸಾಲು) ಉತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಯುಗಾದಿ ಹಬ್ಬದಂದು ಗ್ರಾಮದ ಗ್ರಾಮಸ್ಥರು ಒಂದೆಡೆ ಸೇರಿ ದೇವಾಲಯ ಸಮಿತಿ ವತಿಯಿಂದ ಪಂಚಾಂಗ ಶ್ರವಣದ ಬಳಿಕ ಉತ್ಸವಕ್ಕೆ ನಾಂದಿ ಹಾಡಲಾಯಿತು.
ಮೊದಲಿಗೆ ಉತ್ಸವ ಆಚರಣೆಗಾಗಿ ಗ್ರಾಮದಲ್ಲಿರುವ ಜೋಡಿ ಎತ್ತುಗಳನ್ನು ಸಿಂಗರಿಸಿಕೊಂಡು ದೇವಾಲಯದ ಆವರಣಕ್ಕೆ ಬಂದು ಗ್ರಾಮದ ಮಧ್ಯಭಾಗದಲ್ಲಿ ಶ್ರೀ ಬಸವೇಶ್ವರ ದೇವರಿಗೆ ಪೂಜೆ ಸಲ್ಲಿಸಿದ ನಂತರ ಪಂಚಾಂಗದ ರಾಶಿಯ ಪ್ರಕಾರ ಮೀನಾ ರಾಶಿಯವರು ಜೋಡಿ ಎತ್ತಿನಲ್ಲಿ ಹೊನ್ನಾರು ಕಟ್ಟಬಹುದೆಂದು ಘೋಷಿಸಲಾಯಿತು.
ಸಮಿತಿಯ ತೀರ್ಮಾನದಂತೆ ಈ ಬಾರಿ ಮೀನಾ ರಾಶಿಯ ಚಂದ್ರಶೇಖರ ಅವರು ತಮ್ಮ ಎತ್ತುಗಳನ್ನು ಸಿಂಗರಿ ಹೊಸ ಬಟ್ಟೆ ತೊಟ್ಟು ತಮ್ಮ ಜೋಡಿ ಎತ್ತುಗಳ ಮೂಲಕ ದೇವರ ಭೂಮಿಯಲ್ಲಿ ಸಂಪ್ರದಾಯದಂತೆ ಪೂರ್ವದಿಂದ ಪಶ್ಚಿಮಕ್ಕೆ ಉಳುಮೆ ಮಾಡಿದರು.
ದೇವಾಲಯದ ಅರ್ಚಕ ಸೋಮಶೇಖರ್ ಪೂಜೆ ಸಲ್ಲಿಸಿದ ನಂತರ ಹೊನ್ನಾರು ಉತ್ಸವ ಚಾಲನೆಗೊಂಡಿತು.
ಉತ್ಸವದಲ್ಲಿ ಗ್ರಾಮದ 30ಕ್ಕೂ ಹೆಚ್ಚು ಅಧಿಕ ಜೋಡಿ ಎತ್ತುಗಳು ಸಿಂಗಾರಗೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಾಗಿ ತೊರೆನೂರು ಗ್ರಾಮದ ರಾಜ್ಯ ಹೆದ್ದಾರಿ ಸಮೀಪದಲ್ಲಿರುವ ಬಸವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ನಂತರ ಅವರವರ ಜಮೀನಿನಗೆ ತೆರಳಿ ಹೊನ್ನಾರು (ಚಿನ್ನದ ಸಾಲು)ನ್ನು ಉಳುಮೆ ಮಾಡುವ ಮೂಲಕ ಚಾಲನೆ ನೀಡಿ ಸಂಪ್ರದಾಯದಂತೆ ತಮ್ಮ ಜಮೀನಿನ ಉಳುಮೆಗೆ ಪ್ರಥಮ ಸಾಲು ಎಂದು ಯುಗಾದಿಯ ದಿನದಿಂದು ಸಾಲು ಹೊಡೆಯುವ ಪದ್ಧತಿಯನ್ನು ಕಳೆದ 60 ವರ್ಷಗಳಿಂದಲೂ ಈ ಗ್ರಾಮದಲ್ಲಿ ವೈಭವದಿಂದ ಆಚರಿಸಿಕೊಂಡು ಬರಲಾಗುತ್ತಿದೆ.
ಈ ಸಂದರ್ಭದಲ್ಲಿ ಗ್ರಾಮವು ತಳಿರು ತೋರಣಗಳಿಂದ ಸಿಂಗರಗೊಂಡಿತ್ತು. ಗ್ರಾಮದ ಮಹಿಳೆಯರು ಗ್ರಾಮದ ಬೀದಿಗಳಲ್ಲಿ ವಿವಿಧ ಬಣ್ಣದ ರಂಗೋಲಿಗಳ ಮೂಲಕ ಹೊನ್ನಾರು ಉತ್ಸವವನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಶ್ರೀ ಬಸವೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಹೆಚ್.ಬಿ.ಚಂದ್ರಪ್ಪ, ಕಾರ್ಯದರ್ಶಿ ಸೋಮಶೇಖರ ಆಚಾರಿ, ಉಪಾಧ್ಯಕ್ಷ ಟಿ.ವಿ.ಪ್ರಕಾಶ್, ಗೌರವಧ್ಯಾಕ್ಷ ಚಂದ್ರಶೇಖರ, ಖಜಾಂಚಿ ಟಿ.ಸಿ.ಶಿವಕುಮಾರ್, ಗ್ರಾಮದ ಪ್ರಮುಖರಾದ ಟಿ.ಎಸ್.ಮಹೇಶ್, ಟಿ.ಬಿ. ಮಂಜುನಾಥ, ರವಿಚಂದ್ರನ್, ಶಿವಕುಮಾರ್ ,ಪ್ರಕಾಶ್ , ಕೂಡ್ಲೂರು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ.ಜಿ. ಪ್ರೇಮಕುಮಾರ್, ಚಿದಾನಂದ ಸಮಿತಿಯ ಆಡಳಿತ ಮಂಡಳಿ ಸದಸ್ಯರು ಹಾಗೂ ನೂರಾರು ಗ್ರಾಮಸ್ಥರು ಹಾಜರಿದ್ದರು.
ಸಮಿತಿಯ ವತಿಯಿಂದ ಹೊನ್ನಾರು ಉತ್ಸವಕ್ಕೆ ಆಗಮಿಸಿದ್ದ ಎಲ್ಲಾ ಜೋಡೆತ್ತಿನ ರೈತರಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.
ಸಂಜೆ ವಿದ್ಯುತ್ ಅಲಂಕೃತ ಭವ್ಯ ಮಂಟಪದಲ್ಲಿ ಬಸವೇಶ್ವರನ ವಿಗ್ರಹವನ್ನು ಕುಳ್ಳಿರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಸವನ ವಾದ್ಯ ಮೆರವಣಿಗೆ ಕಾರ್ಯಕ್ರಮ ನಡೆಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!