ಹೊಸದಿಗಂತ ವರದಿ, ಮಡಿಕೇರಿ:
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಏಳು ದಿನಗಳ ಕಾಲ ನಡೆಯಲಿರುವ ವಿಶ್ವ ಜಾಂಬೂರಿ ಸಾಂಸ್ಕೃತಿಕ ಸಮ್ಮೇಳನಕ್ಕೆ ಕೊಡಗು ಜಿಲ್ಲೆಯಿಂದ ಹೊರೆಕಾಣಿಕೆ ಯಾಗಿ 1250 ಕೆ.ಜಿ.ಕಾಫಿ ಪುಡಿಯನ್ನು ನೀಡಲಾಗಿದೆ.
ದಾನಿಗಳು ನೀಡಿದ ಕಾಫಿ ಪುಡಿಯನ್ನು ಮೂಡುಬಿದಿರೆ ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ ಎಂ.ಮೋಹನ್ ಆಳ್ವಾ ಅವರಿಗೆ ಜಿಲ್ಲಾ ಸ್ಕೌಟ್ಸ್ ಸಂಸ್ಥೆಯ ಆಯುಕ್ತ ಜಿಮ್ಮಿ ಸಿಕ್ವೇರಾ ಹಾಗೂ ಸ್ಕೌಟ್ಸ್ ತರಬೇತುದಾರರಾದ ಮೈಥಿಲಿ ಅವರು ಕೊಡಗಿನ ಪರವಾಗಿ ಹಸ್ತಾಂತರಿಸಿದ್ದಾರೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ ತಿಳಿಸಿದರು.
ವಿಶ್ವ ಜಾಂಬೂರಿ ಸಮ್ಮೇಳನದಲ್ಲಿ ಭಾಗವಹಿಸಲಿರುವ 50 ಸಾವಿರ ಸ್ಕೌಟ್ಸ್ ಮತ್ತು ಗೈಡ್ಸ್’ನ ವಿದ್ಯಾರ್ಥಿ ಪ್ರತಿನಿಧಿಗಳು ಹಾಗೂ ಶಿಕ್ಷಕರು ಮತ್ತು ಸಮ್ಮೇಳನದಲ್ಲಿ ಭಾಗವಹಿಸಲಿರುವ ನಾಗರಿಕರು ಕೊಡಗಿನ ತಾಜಾ ಕಾಫಿಯನ್ನು ಸವಿಯಲಿದ್ದಾರೆ.
ಕೊಡಗಿನ ಕೂಡ್ಲೂರು ಕೈಗಾರಿಕಾ ಕೇಂದ್ರದ ಎಸ್.ಎಲ್.ಎನ್.ಲೆವಿಸ್ಟಾ ಕಾಫಿ ಕಂಪನಿ ವತಿಯಿಂದ 1000 ಕೆ.ಜಿ.ಲೆವಿಸ್ಟಾ ಕಾಫಿ, ಗೈಡ್ಸ್ ಸಂಸ್ಥೆಯ ಪ್ರಮುಖರಾದ ಮೈಥಿಲಿ ಅವರ ಸಹಕಾರದಿಂದ ವೀರಾಜಪೇಟೆ ತಾಲೂಕಿನ ಅರಮೇರಿ ಕಳಂಚೇರಿ ಮಠದ ಎಸ್.ಎಂ.ಎಸ್.ವಿದ್ಯಾಸಂಸ್ಥೆ ವತಿಯಿಂದ 146 ಕೆ.ಜಿ. ಹಾಗೂ ಕೂಡ್ಲೂರು ಸುವರ್ಣ ಕಾಫಿ ಕಂಪನಿ ವತಿಯಿಂದ 50 ಕೆ.ಜಿ.ಕಾಫಿ ಪುಡಿಯನ್ನು ವಿಶ್ವ ಜಾಂಬೂರಿ ಸಮ್ಮೇಳನಕ್ಕೆ ಕೊಡುಗೆಯಾಗಿ ನೀಡಲಾಗಿದೆ.
ಜಿಲ್ಲಾಧಿಕಾರಿ ಡಾ ಬಿ.ಸಿ.ಸತೀಶ್ ಅವರ ಸಹಕಾರದಿಂದ ವಿಶ್ವ ಜಾಂಬೂರಿ ಸಮ್ಮೇಳನಕ್ಕೆ ಉಚಿತವಾಗಿ ಕಾಫಿ ಪುಡಿ ನೀಡಿದ ಕೂಡ್ಲೂರು ಎಸ್.ಎನ್.ಎಲ್. ಕಾಫಿ ಉದ್ಯಮಿಗಳಾದ ಸಾತಪ್ಪನ್ ಹಾಗೂ ವಿಶ್ವನಾಥನ್, ಮಡಿಕೇರಿ ಸ್ಕೌಟ್ಸ್ ಮತ್ತು ಗೈಡ್ಸ್’ನ ಸ್ಥಳೀಯ ಸಂಸ್ಥೆಯ ಅಧ್ಯಕ್ಷರೂ ಆದ ಕಾಫಿ ಉದ್ಯಮಿ ಬಿ.ಎನ್.ರಮೇಶ್ ಹಾಗೂ ಅರಮೇರಿ ಮಠದ ವಿದ್ಯಾಸಂಸ್ಥೆಗೆ ಕೃತಜ್ಞತೆ ಸಲ್ಲಿಸಲಾಗಿದೆ ಎಂದು ಬೇಬಿ ಮ್ಯಾಥ್ಯೂ ತಿಳಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ