ಕೊಡಗಿನಲ್ಲಿ ಮೊಟ್ಟೆ ಎಸೆದ ಪ್ರಕರಣಕ್ಕೂ ಬಿಜೆಪಿಗೂ ಸಂಬಂಧವಿಲ್ಲ: ದರ್ಶನ್ ಜೋಯಪ್ಪ

ಹೊಸದಿಗಂತ ವರದಿ, ಮಡಿಕೇರಿ:
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದ ಪ್ರಕರಣಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಎಂ.ಜೆ.ದರ್ಶನ್ ಜೋಯಪ್ಪ ಸ್ಪಷ್ಟಪಡಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಏನೂ ಅರಿಯದೆ ತಪ್ಪು ಮಾಡಿದವರನ್ನು ಜನತೆ ಕ್ಷಮಿಸುತ್ತಾರೆ. ಆದರೆ ಎಲ್ಲವನ್ನೂ ಅರಿತು ತಪ್ಪು ಮಾಡಿದವರು ಪಶ್ಚಾತ್ತಾಪ ಪಡುವ ಮೂಲಕ ಪಾಠ ಕಲಿಯಬೇಕು ಎನ್ನುವುದು ಜಿಲ್ಲೆಯ ಜನರ ಅಭಿಪ್ರಾಯವಾಗಿದೆ ಎಂದು ತಿಳಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗಿ ಬೆಟ್ಟಗುಡ್ಡಗಳು ಕುಸಿದು, ಪ್ರವಾಹ ಬಂದು ರೈತರು, ಬಡವರು, ಕಾರ್ಮಿಕರು, ಮನೆ, ಆಸ್ತಿಯನ್ನು ಕಳೆದುಕೊಂಡು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಾಗ ಜವಾಬ್ದಾರಿಯುತ ವಿರೋಧ ಪಕ್ಷದ ನಾಯಕರೆನಿಸಿಕೊಂಡವರು ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸದೆ ಕೋಟಿ ಕೋಟಿ ರೂ.ದುಂದು ವೆಚ್ಚ ಮಾಡಿ ಸಿದ್ದರಾಮೋತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಆ ಮೂಲಕ ಕೊಡಗು ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಅಲ್ಲದೆ ಈ ಹಿಂದೆ ಕೊಡವರನ್ನು ಗೋಮಾಂಸ ಭಕ್ಷಕರೆಂದು ನೀಡಿರುವ ಹೇಳಿಕೆ ಮತ್ತು ಇಸ್ಲಾಂನಲ್ಲಿ ಜಯಂತಿಗಳ ಆಚರಣೆ ಇಲ್ಲದಿದ್ದರೂ ಮತಾಂಧ ಟಿಪ್ಪುವಿನ ಜಯಂತಿ ಆಚರಿಸಿರುವುದು ಕೊಡಗಿನ ಜನರ ಮನಸ್ಸಿಗೆ ನೋವುಂಟು ಮಾಡಿದೆ ಎಂದು ದರ್ಶನ್‌ ಜೋಯಪ್ಪ ಹೇಳಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್’ನ್ನು ಅಪಮಾನಿಸಿರುವುದು ಕೂಡಾ ದೇಶಭಕ್ತರಿಗೆ ಅತೀವ ಬೇಸರ ಮೂಡಿಸಿದೆ. ಟಿಪ್ಪು ಜಯಂತಿಯ ಆಚರಣೆಯ ಮೂಲಕ ಅಮಾಯಕರ ಸಾವಿಗೆ ಕಾರಣವಾದ ಘಟನೆಯನ್ನು ಜನ ಮರೆಯಲು ಸಾಧ್ಯವಿಲ್ಲ. ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಕೊಡಗಿನ ಜನರ ಅಸಮಾಧಾನ ಸಹಜವಾಗಿಯೇ ಸಿದ್ದರಾಮಯ್ಯ ಅವರ ವಿರುದ್ಧ ಸ್ಫೋಟಗೊಂಡಿದೆ. ಪ್ರಜ್ಞಾವಂತರು ತಮ್ಮದೇ ಆದ ರೀತಿಯಲ್ಲಿ ಉತ್ತರ ನೀಡಿದ್ದಾರೆ ಎಂದು ದರ್ಶನ್ ಜೋಯಪ್ಪ ಸಮರ್ಥಿಸಿಕೊಂಡಿದ್ದಾರೆ. ಆದರೆ ಕಾರಿನ ಮೇಲೆ ಮೊಟ್ಟೆ ಎಸೆದಿದ್ದು ಬಿಜೆಪಿ ಕಾರ್ಯಕರ್ತರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!