ವಿಶ್ವ ದಾಖಲೆ ಬರೆಯಲು ಸಜ್ಜಾದ ‘ಕೊಡವ ಕ್ಲಾನ್’

ಹೊಸದಿಗಂತ ವರದಿ ಮಡಿಕೇರಿ:

ಕೊಡವರ ಎಲ್ಲಾ ಒಕ್ಕಗಳ ವಂಶಾವಳಿ ವೃಕ್ಷವನ್ನು www.kodavaclan.com ಮೂಲಕ ಒಂದಕ್ಕೊಂದು ನೇಯ್ದು ಎಲ್ಲಾ ಕೊಡವರು ಒಂದೇ ಕುಟುಂಬಕ್ಕೆ ಸೇರಿದವರೆಂದು ದೃಢೀಕರಣ ಪಡಿಸುವ ಪ್ರಯತ್ನದಲ್ಲಿ ಯಶಸ್ಸು ಕಂಡಿರುವ ಕೊಡವ ಕ್ಲಾನ್ ಸಂಸ್ಥೆ ಇದೀಗ ವಿಶ್ವ ದಾಖಲೆ ಬರೆಯಲು ಸಜ್ಜಾಗಿದೆ.

ಇದೇ ಡಿ.24 ರಂದು ವೀರಾಜಪೇಟೆ ತಾಲೂಕಿನ ಬಿಟ್ಟಂಗಾಲದ “ಕೂರ್ಗ್ ಎತ್ನಿಕ್” ನಲ್ಲಿ ಎಲ್ಲಾ ಕುಟುಂಬಗಳ ಸುಮಾರು 5 ಸಾವಿರ ಮಂದಿಯನ್ನು ಒಂದೆಡೆ ಸೇರಿಸಿ ಈಗಾಗಲೇ ಗಿನ್ನಿಸ್ ಬುಕ್’ನಲ್ಲಿ ದಾಖಲಾಗಿರುವ 4514 ಮಂದಿಯ “ಲಾರ್ಜೆಸ್ಟ್ ಫ್ಯಾಮಿಲಿ ಗ್ಯಾದರಿಂಗ್” ದಾಖಲೆಯನ್ನು ಮುರಿಯುವ ಗುರಿ ಇದಾಗಿದೆ ಎಂದು ಕೊಡವ ಕ್ಲಾನ್ ಸಂಸ್ಥೆಯ ಸಂಸ್ಥಾಪಕ ಗುಮ್ಮಟಿರ ಕಿಶು ಉತ್ತಪ್ಪ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಫ್ರಾನ್ಸ್’ನಲ್ಲಿ ಒಲಿಮಿಯಾ ಕುಟುಂಬದ 4514 ಮಂದಿ ಒಂದೆಡೆ ಸೇರಿದ ದಾಖಲೆಯನ್ನು ಮುರಿಯುವುದಕ್ಕಾಗಿ ಸುಮಾರು 5 ಸಾವಿರಕ್ಕೂ ಹೆಚ್ಚಿನ ಕೊಡವರನ್ನು ಸೇರಿಸಲಾಗುತ್ತಿದೆ. ಇಲ್ಲಿ ಬಂದು ಸೇರುವ ಎಲ್ಲಾ ಕೊಡವರು ಒಂದೇ ಕುಟುಂಬದವರೆಂದು ದೃಢೀಕರಿಸಿ ಅವಿನಾಭಾವ ಸಂಬಂಧವನ್ನು ಗಟ್ಟಿಗೊಳಿಸುವ ವಿಶ್ವಾಸವನ್ನು ಹೊಂದಿದ್ದೇವೆ. ಎಲ್ಲಾ ಕೊಡವರು ಒಂದೇ ಸ್ಥಳದಲ್ಲಿ ಸೇರುವ ಮೂಲಕ ಹೊಸ ವಿಶ್ವ ದಾಖಲೆ ಮಾಡಲಿದ್ದೇವೆ ಎಂದರು.

ವಿರಾಜಪೇಟೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಇಂಡಿಯನ್ ಬುಕ್ ಆಫ್ ರೆಕಾರ್ಡ್’ನ ಪ್ರತಿನಿಧಿಗಳು ಆಗಮಿಸಿ ಸಂಖ್ಯೆಯನ್ನು ದಾಖಲೀಕರಣ ಮಾಡಿಕೊಳ್ಳಲಿದ್ದಾರೆ. ನಂತರ ವಿಶ್ವ ದಾಖಲೆಗೆ ಶಿಫಾರಸ್ಸು ಆಗಲಿದೆ ಎಂದು ತಿಳಿಸಿದರು.

ಕೊಡವರು ಸೇರುವ “ಕೂರ್ಗ್ ಎತ್ನಿಕ್” ನಲ್ಲಿ ಹಲವು ಬಗೆಯ ಸುಮಾರು 50 ಸ್ಟಾಲ್’ಗಳನ್ನು ತೆರೆಯಲಾಗುವುದು. ವಿವಿಧ ಸ್ಪರ್ಧೆಗಳು, ಫ್ಯಾಷನ್ ಶೋ ಮತ್ತು ವಾಲಗತ್ತಾಟ್ ನಡೆಯಲಿದೆ. ಹಿರಿಯ ಕಲಾವಿದ ಮುಳ್ಳೇರ ಜಿಮ್ಮಿ ಅಯ್ಯಪ್ಪ ಅವರ ನೆನಪಿನಲ್ಲಿ ಅವರ ಹಾಡುಗಳನ್ನು ವೀರಾಜಪೇಟೆ ತಂಡದವರು ಹಾಡಲಿದ್ದಾರೆ. ಕೊಡವ ಸಾಹಿತಿಗಳು ಬರೆದಿರುವ ಪುಸ್ತಕಗಳ ಮಾರಾಟಕ್ಕಾಗಿ ಪ್ರತ್ಯೇಕ ಸ್ಟಾಲ್ ವ್ಯವಸ್ಥೆ ಮಾಡಲಾಗುವುದು. ಕಾರ್ಯಕ್ರಮ ಬೆಳಗ್ಗೆ 8.30 ಗಂಟೆಯಿಂದ ಹೆಸರು ನೋಂದಣಿ ಮೂಲಕ ಆರಂಭಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಕೊಡವ ಕ್ಲಾನ್ ಸಂಸ್ಥೆ ಕಳೆದ 8 ವರ್ಷಗಳಿಂದ 21 ಸಾವಿರಕ್ಕೂ ಹೆಚ್ಚಿನ ಕೊಡವರು ಒಂದೇ ವಂಶ ವೃಕ್ಷದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ್ದು, ಈಗಾಗಲೇ ಇಂಡಿಯನ್ ಬುಕ್ ಆಫ್ ರೆಕಾರ್ಡ್’ನಲ್ಲಿ ದಾಖಲಾಗಿದೆ. 18 ತಲೆಮಾರಿನ ಒಟ್ಟು 751 ಕೊಡವ ಕುಟುಂಬಗಳ ದಾಖಲೆಗಳು ಕೊಡವ ಕ್ಲಾನ್ ವಂಶವೃಕ್ಷದಲ್ಲಿದೆ ಎಂದು ಕಿಶು ಉತ್ತಪ್ಪ ತಿಳಿಸಿದರು.

ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಕೊಡವ ಕ್ಲಾನ್’ನ ಕೊಡವ ಕುಟುಂಬಗಳ ವಂಶವೃಕ್ಷದ ಪರಿಕಲ್ಪನೆ ಅದ್ಭುತವಾಗಿದ್ದು, ವೀರಾಜಪೇಟೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಂಡು ವಿಶ್ವ ದಾಖಲೆಯನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಕೊಡವ ಸಾಹಿತಿಗಳಿಗೆ ತಾವು ಬರೆದ ಪುಸ್ತಕಗಳನ್ನು ಯಾವ ರೀತಿ ಓದುಗರಿಗೆ ತಲುಪಿಸಬೇಕು ಮತ್ತು ಮಾರಾಟ ಮಾಡಬೇಕು ಎನ್ನುವ ಬಗ್ಗೆ ಮಾಹಿತಿಯ ಕೊರತೆ ಇದೆ. ಇವರುಗಳಿಗೆ ಸಹಕಾರಿಯಾಗಲಿ ಎನ್ನುವ ಕಾರಣಕ್ಕೆ ಪ್ರತ್ಯೇಕ ಪುಸ್ತಕ ಮಾರಾಟದ ಸ್ಟಾಲ್ ತೆರೆಯಲಾಗುವುದು. ಮಾರಾಟವಾಗಿ ಬಂದ ಹಣವನ್ನು ಆಯಾ ಪುಸ್ತಕ ರಚನೆಕಾರರಿಗೆ ನೀಡಲಾಗುವುದು ಎಂದರು.
ಹೆಚ್ಚಿನ ಮಾಹಿತಿಗೆ 98453 90522 (ಕಿಶು ಉತ್ತಪ್ಪ) ಹಾಗೂ 98807 78047 (ಬೊಳ್ಳಜಿರ ಬಿ.ಅಯ್ಯಪ್ಪ) ಅವರನ್ನು ಸಂಪರ್ಕಿಸಬಹುದೆಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!